Breaking News
recent

ನಿರ್ಮಾಪಕರ ಸಿಟ್ಟು ಕಲಾವಿದರ ಪಟ್ಟು

ಕಿರುತೆರೆ ರಿಯಾಲಿಟಿ ಷೋಗಳಿಂದ ಚಿತ್ರೋದ್ಯಮಕ್ಕೆ ಪೆಟ್ಟಾಗಿದೆಯೇ? ನಿರ್ಮಾಪಕರ ಒತ್ತಾಯಗಳು ಪ್ರಾಯೋಗಿಕವೇ? ಇಲ್ಲಿದೆ ಒಂದು ಅವಲೋಕನ.
ಕಿರುತೆರೆಯ ರಿಯಾಲಿಟಿ ಷೋಗಳಿಂದ ಸಿನಿಮಾಗಳಿಗೆ ಪೆಟ್ಟು ಬೀಳುತ್ತಿದೆ. ಸಿನಿಮಾ ನಾಯಕರು ಕಿರುತೆರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಸಿನಿಮಾಗಳಿಗೆ ಪ್ರೇಕ್ಷಕರು ಕಡಿಮೆಯಾಗುತ್ತಿದ್ದಾರೆ. ಹೀಗೆಂದು ಅಳಲು ತೋಡಿಕೊಳ್ಳುತ್ತಿ ರುವ ನಿರ್ಮಾಪಕರು ತಾರಾ ವರ್ಚಸ್ಸಿನ ನಾಯಕ ನಟರ ವಿರುದ್ಧ ಮುನಿಸಿಕೊಂಡಿದ್ದಾರೆ; ಟೀವಿ ವಾಹಿನಿಗಳ ವಿರುದ್ಧ ಸಿಟ್ಟಾಗಿದ್ದಾರೆ, ‘ಚಲನಚಿತ್ರ ವಾಣಿಜ್ಯ ಮಂಡಳಿ’ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಕನ್ನಡ ಚಿತ್ರಗಳಿಂದ ಹೆಸರು–ಹಣ ಮಾಡಿದ ಕಲಾವಿದರು ಟೀವಿ ರಿಯಾಲಿಟಿ ಷೋಗಳಲ್ಲೂ ಜನಪ್ರಿಯತೆ ಗಳಿಸುತ್ತಿದ್ದಾರೆ. ಸ್ಟಾರ್ ಕಲಾವಿದರು ನಿತ್ಯ ಮನೆಯ ಟೀವಿ ಪರದೆಯಲ್ಲೇ ಕಾಣಿಸಿದರೆ ಅವರನ್ನು ನೋಡಲೆಂದು ಜನರು ಚಿತ್ರಮಂದಿರಗಳ ಬಾಗಿಲಿಗೆ ಯಾಕಾದರೂ ಬರುತ್ತಾರೆ? ಕನ್ನಡ ಕಲಾವಿದರೇ ಕನ್ನಡದ ಸಿನಿಮಾಗಳಿಗೆ ಅಡ್ಡಗಾಲಾಗುತ್ತಿದ್ದಾರೆ, ನಿರ್ಮಾಪಕರು ನೆಲೆ ಕಳೆದುಕೊಳ್ಳುವ ಸ್ಥಿತಿ ಸೃಷ್ಟಿಯಾಗುತ್ತಿದೆ. ಹಾಗಾಗಿ ಸಿನಿಮಾ ಕಲಾವಿದರು ರಿಯಾಲಿಟಿ ಷೋಗಳಲ್ಲಿ ಭಾಗವಹಿಸಬಾರದು ಎನ್ನುವುದು ನಿರ್ಮಾಪಕರ ಒತ್ತಾಯ.

‘ಟೀವಿ ವಾಹಿನಿಗಳು ಚಿತ್ರೋದ್ಯಮವನ್ನು ಬೀದಿಗೆ ತಂದುಬಿಟ್ಟವು’ ಎಂದು ಈ ಹಿಂದೆ ಹೇಳಿದ ಕಲಾವಿದರೇ ಇಂದು ರಿಯಾಲಿಟಿ ಷೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈಗ ಕಲಾವಿದರಿಗೆ ಎಷ್ಟೇ ಮನವಿ ಮಾಡಿದರೂ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ ಎನ್ನುವುದು ನಿರ್ಮಾಪಕರ ಅಳಲು.

‘ರಿಯಾಲಿಟಿ ಷೋಗಳಲ್ಲಿ ಕಲಾವಿದರು ಭಾಗವಹಿಸಬಾರದು. ಇಂಥ ಷೋಗಳನ್ನು ರಾತ್ರಿ ಹತ್ತು ಗಂಟೆಯ ಮೇಲೆ ಮಾತ್ರ ವಾಹಿನಿಗಳು ಪ್ರಸಾರ ಮಾಡಬೇಕು ಹಾಗೂ ಮರುಪ್ರಸಾರ ಮಾಡಬಾರದು’ ಎನ್ನುವುದು ನಿರ್ಮಾಪಕರ ಆಗ್ರಹ. ಅಂದಹಾಗೆ, ಈ ಒತ್ತಾಯ–ವಿನಂತಿ ಎಷ್ಟರಮಟ್ಟಿಗೆ ಸರಿ? ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿ, ಈಗ ರಿಯಾಲಿಟಿ ಷೋಗಳಲ್ಲಿ ಜನರನ್ನು ರಂಜಿಸುತ್ತಿರುವ ಕೆಲವು ಪ್ರಮುಖರನ್ನು ಈ ವಿಚಾರವಾಗಿ ಪ್ರತಿಕ್ರಿಯೆ ಕೇಳಿದಾಗ ದೊರೆತ ಉತ್ತರ – ‘ಸದ್ಯ ಏನೂ ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿಲ್ಲ’. ಆದರೆ, ಕೆಲವರು ಮಾತ್ರ ತಮ್ಮ ಅಭಿಪ್ರಾಯವನ್ನು ಹೇಳಲು ಹಿಂಜರಿಯಲಿಲ್ಲ.

ಸಿನಿಮಾಕ್ಕೆ ಆದ್ಯತೆ ಕೊಡಲಿ
ಸಿನಿಮಾ ಕಲಾವಿದರು ರಿಯಾಲಿಟಿ ಷೋಗಳಲ್ಲಿ ಭಾಗವಹಿಸಲೇಬಾರದು ಎಂದು ನಿರ್ಮಾಪಕರು ಒತ್ತಡ ಹೇರುವಂತಿಲ್ಲ. ಆದರೆ ರಾತ್ರಿ ಹತ್ತು ಗಂಟೆ ನಂತರ ರಿಯಾಲಿಟೊ ಷೋ ಪ್ರಸಾರ ಮಾಡಿ ಎಂದು ಕೇಳುವುದರಲ್ಲಿ ತಪ್ಪಿಲ್ಲ. ‘ಚಲನಚಿತ್ರ ವಾಣಿಜ್ಯ ಮಂಡಳಿ’ ಕನ್ನಡ ಚಿತ್ರೋದ್ಯಮದ ತಾಯಿ ಇದ್ದಂತೆ. ಈ ರಿಯಾಲಿಟಿ ಷೋಗಳಿಂದ ರಾತ್ರಿ ಪ್ರದರ್ಶನಗಳಿಗೆ ಎಷ್ಟು ಹೊಡೆತ ಬಿದ್ದಿದೆ ಎಂಬ ಅಧ್ಯಯನ ಮಾಡಿಯೇ ಮಂಡಳಿ ಇಂಥದ್ದೊಂದು ಬೇಡಿಕೆ ಇಟ್ಟಿದೆ.
rockline venkatesh producer
rockline venkatesh producer


ಯಾರಿಗೆ ಮಾರುಕಟ್ಟೆ ಇರುತ್ತದೋ ತಾರಾ ವರ್ಚಸ್ಸು ಇರುತ್ತದೋ ಅಂಥವರನ್ನೇ ವಾಹಿನಿಗಳು ಕರೆಯುತ್ತವೆ. ಚಿತ್ರರಂಗ ಅವರನ್ನು ಇಷ್ಟು ದೊಡ್ಡದಾಗಿ ಬೆಳೆಸಿದೆ. ಸ್ಟಾರ್‌ಗಳು ವಾಹಿನಿಗಳಲ್ಲಿ ಕಾಣಿಸಿಕೊಂಡರೆ ಮಾರುಕಟ್ಟೆ ವಿಸ್ತರಿಸುತ್ತದೆ ಎನ್ನುವುದನ್ನು ಅಲ್ಲಗಳೆಯುವುದಿಲ್ಲ. ಆದರೆ ವಾಹಿನಿಗಳಲ್ಲಿ ಕಾಣಿಸಿಕೊಳ್ಳುವುದು ಹಕ್ಕು ಎಂಬಂತೆಯೇ ಚಿತ್ರೋದ್ಯಮದ ಕಾಳಜಿ ಮಾಡುವ ಜವಾಬ್ದಾರಿಯೂ ಅವರಿಗಿರಲಿ. ರಿಯಾಲಿಟಿ ಷೋಗಳಿಗೆ ಕೊಡುವುದಕ್ಕಿಂತ ಹತ್ತರಷ್ಟು ಆದ್ಯತೆಯನ್ನು ಸಿನಿಮಾ ಉದ್ಯಮಕ್ಕೆ ಕೊಡಲಿ. ಅವರದೇ ಸಿನಿಮಾಗಳು ಬಿಡುಗಡೆ ಆದಾಗ ಸೆಕೆಂಡ್ ಷೋಗೆ ಪ್ರೇಕ್ಷಕರು ಕಡಿಮೆ ಆಗದಂತೆ ಮುತುವರ್ಜಿ ವಹಿಸಬೇಕು. ಇವೆಲ್ಲ ಹೊಂದಾಣಿಕೆಯ ಮೇಲೆ ನಡೆಯುವ ವ್ಯವಹಾರಗಳು.

ಇನ್ನು ಕಲಾವಿದರ ಸಂಘದ ಕಾರ್ಯದರ್ಶಿಯಾಗಿ ಪ್ರತಿಕ್ರಿಯಿಸಬೇಕು ಎಂದರೆ, ಈ ವಿಚಾರಕ್ಕೂ ಕಲಾವಿದರ ಸಂಘಕ್ಕೂ ಸಂಬಂಧವಿಲ್ಲ. ಏಕೆಂದರೆ ಸಿನಿಮಾ ಮಾಡುವಾಗ ಕಲಾವಿದರಿಗೆ ತೊಂದರೆ ಆಗದಂತೆ, ವಿವಾದಗಳಿಂದಾಗಿ ಚಿತ್ರಕ್ಕೆ ತೊದರೆ ಆಗದಂತೆ ನೋಡಿಕೊಳ್ಳುವುದಷ್ಟೇ ಸಂಘದ ಜವಾಬ್ದಾರಿ. ಅದರ ಹೊರತಾಗಿ ಕಲಾವಿದರ ವೈಯಕ್ತಿಕ ವಿಚಾರಗಳಲ್ಲಿ ನಾವು ತಲೆಹಾಕಲಾಗುವುದಿಲ್ಲ.
–ರಾಕ್‌ಲೈನ್ ವೆಂಕಟೇಶ್, ನಿರ್ಮಾಪಕ

*
ದೂರುವವರು ಖಾಲಿ ಕೂತಾಗ ಕೆಲಸ ಕೊಟ್ಟಿಲ್ಲ...
ನನ್ನ ಪ್ರಕಾರ ಇದೊಂದು ಸಮಸ್ಯೆಯೇ ಅಲ್ಲ. ಸಿನಿಮಾ–ಕಿರುತೆರೆ ಎಂದು ಭಿನ್ನವಾಗಿ ನೋಡಲು ನನಗೆ ಸಾಧ್ಯವೇ ಇಲ್ಲ. ನಾನು ನಾಯಕ ನಟನಾಗುವುದಕ್ಕೂ ಮೊದಲು ಧಾರಾವಾಹಿಯಲ್ಲಿಯೇ ನಟಿಸಿದ್ದೇನೆ. ಎರಡೂ ಕಡೆಗಳಲ್ಲೂ ಸಾಕಷ್ಟು ಒಳ್ಳೆಯ ಅವಕಾಶಗಳು ಸಿಕ್ಕಿವೆ, ಜನರಿಗೆ ಹತ್ತಿರವಾಗುತ್ತಲೇ ಇರುತ್ತೇವೆ. ಜನರಿಗಂತೂ ಇದರಲ್ಲಿ ಬೇಸರವಿಲ್ಲ. ರಿಯಾಲಿಟಿ ಷೋಗಳಲ್ಲಿ ನಾನು ಚೆನ್ನಾಗಿಯೇ ತೀರ್ಪು ನೀಡುತ್ತೇನೆ ಎಂದು ಜನರೇ ಹೇಳುತ್ತಾರೆ. 


vijay raghavendra
Vijaya Raghavendra 
ನನ್ನ ಕೆಲಸ, ನನ್ನ ಜೀವನ. ನನ್ನ ಅನಿವಾರ್ಯತೆಗಳಿಗೆ ಕೆಲಸ ಮಾಡುತ್ತೇನೆ. ನಾನು ಕೆಲಸ ಮಾಡುವುದಕ್ಕೆ ಯಾರಾದರೂ ಮುನಿಸಿಕೊಂಡರೆ ನಾನೇನು ಮಾಡಲಿ. ಹೀಗೆ ಮುನಿಸಿಕೊಳ್ಳುವವರು ನಾನು ಮೂರು ವರ್ಷ ಖಾಲಿ ಕೂತಾಗ ಬಂದು ನನಗೆ ಕೆಲಸ ಕೊಟ್ಟಿಲ್ಲ. ನಾವು ಸಿನಿಮಾಗಳನ್ನೂ ಮಾಡುತ್ತಿದ್ದೇವೆ. ಚಿತ್ರೋದ್ಯಮದ ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದೇವೆ. ಅಂಥದ್ದರಲ್ಲಿ ಚಿತ್ರೋದ್ಯಮದವರೇ ಉದ್ಯಮದಲ್ಲಿ ಇರುವವರ ಕಾಲು ಎಳೆಯುತ್ತಿದ್ದರೆ ಬೆಳವಣಿಗೆಗೆ ಅವಕಾಶ ಎಲ್ಲಿ?

ಈ ವರ್ಷ ಎಷ್ಟೆಲ್ಲ ಸಿನಿಮಾಗಳು ಒಳ್ಳೆಯ ಗಳಿಕೆ ಮಾಡಿವೆ, ಅವನ್ನು ನೋಡಿದ್ದೂ ಪ್ರೇಕ್ಷಕರೇ ಅಲ್ಲವೇ. ಮುಖ್ಯವಾಗಿ ಚಿತ್ರೋದ್ಯಮಕ್ಕೆ ಟೀವಿ ಬೇಕು, ಟೀವಿಗೆ ಚಿತ್ರೋದ್ಯಮ ಬೇಕು. ಈಗ ಎಷ್ಟೋ ಸಿನಿಮಾ ನಿರ್ಮಾಪಕರು ಧಾರಾವಾಹಿಗಳನ್ನೂ ನಿರ್ಮಿಸುತ್ತಿದ್ದಾರೆ. ಇದನ್ನು ಯಾರಾದರೂ ಪ್ರಶ್ನಿಸಲು ಸಾಧ್ಯವೇ?
ಕೆಲಸ ಸಿಗುವುದು ಕಮ್ಮಿಯಾಗುತ್ತಿದೆ, ಸ್ಪರ್ಧೆಯಿದೆ, ಯಶಸ್ಸು ಗಳಿಸುವುದು ಕಷ್ಟವಾಗುತ್ತಿದೆ – ಇಷ್ಟೆಲ್ಲ ಕೆಲಸಗಳ ನಡುವೆ ಹೀಗೆಲ್ಲ ಬರುವ ಹೇಳಿಕೆಗಳಿಗೆ ಕಲಾವಿದರು ಪ್ರತಿಕ್ರಿಯಿಸುತ್ತಿಲ್ಲ. ಎಲ್ಲಕ್ಕೂ ಹೆಚ್ಚಾಗಿ ಇಂಥದ್ದೊಂದು ಸಮಸ್ಯೆ ಯಾಕೆ ಬರುತ್ತಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ.
–ವಿಜಯ್ ರಾಘವೇಂದ್ರ, ನಟ, ರಿಯಾಲಿಟಿ ಷೋ ವಿಜೇತ–ನಿರ್ಣಾಯಕ

*
ಚೌಕಾಸಿ ಸರಿಯಲ್ಲ..
‘ನೀವು ರಿಯಾಲಿಟಿ ಷೋ ಹತ್ತು ಗಂಟೆ ನಂತರ ಪ್ರಸಾರ ಮಾಡಿ, ಸಿನಿಮಾ ಕಲಾವಿದರನ್ನು ಬಳಸಿಕೊಳ್ಳಬೇಡಿ’ ಎಂದೆಲ್ಲ ವಾಹಿನಿಗಳ ಜೊತೆ ನಿರ್ಮಾಪಕರು ಚೌಕಾಸಿ ಮಾಡುವುದು ಖಂಡಿತವಾಗಿಯೂ ಸರಿಯಲ್ಲ. ಇದು ತಮಾಷೆ ಅನ್ನಿಸುತ್ತದೆ. ಸಿನಿಮಾ–ಟೀವಿ ಎರಡೂ ಜೊತೆಜೊತೆಗೆ ಬಾಳಬೇಕಿರುವ ಮನರಂಜನಾ ಉದ್ಯಮ.
parameshwar gundkal
parameshwar gundkal colors kannada channel head


ಧಾರಾವಾಹಿಗಳಿಂದ ಹೆಸರು ಮಾಡಿದ ಎಷ್ಟೊಂದು ನಟ–ನಟಿಯರನ್ನು ಸಿನಿಮಾಮಂದಿ ಕರೆದೊಯ್ದಿದ್ದಾರೆ. ಟೀವಿಯಿಂದ ಚಿತ್ರೋದ್ಯಮಕ್ಕೆ, ಚಿತ್ರೋದ್ಯಮದಿಂದ ವಾಹಿನಿಗಳಿಗೆ ಕೊಡುಕೊಳ್ಳುವಿಕೆ ಇದ್ದೇ ಇದೆ. ನಮ್ಮದೇ ವಾಹಿನಿಯ ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ರಂಜನಿ, ‘ಲಕ್ಷ್ಮೀ ಬಾರಮ್ಮ’ದ ನೇಹಾ ಗೌಡ, ಕವಿತಾ ಗೌಡ, ‘ಅಗ್ನಿಸಾಕ್ಷಿ’ಯ ವೈಷ್ಣವಿ, ವಿಜಯ್‌ಸೂರ್ಯ, ‘ಅಶ್ವಿನಿ ನಕ್ಷತ್ರ’ದ ಮಯೂರಿ, ಜೆಕೆ ಸಿನಿಮಾ ಮಾಡುತ್ತಿದ್ದಾರೆ.

ಅವರು ವಾಹಿನಿಯನ್ನು ಬಿಟ್ಟಾಗ ನಮಗೂ ತೊಂದರೆ ಆಗಿದೆ. ಇಂಥ ಸಂದರ್ಭಗಳಲ್ಲಿ ‘ನೀವು ಹಾಗೆ ಮಾಡಬೇಡಿ’ ಎಂದು ನಾವು ಅವರಿಗೆ ಹೇಳಿದರೆ ಸರಿಯಾಗುತ್ತದೆಯೇ? ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ. ತಮ್ಮ ಪಾಡಿಗೆ ತಾವು ಬದುಕಿಕೊಳ್ಳುವ ಶಕ್ತಿ ಇವೆರಡೂ ಉದ್ಯಮಗಳಿಗಿವೆ. ಅತಾರ್ಕಿಕ ನಿಯಮಗಳನ್ನು ಮಾಡಿ ಉದ್ಯಮವನ್ನು ಉಳಿಸಿಕೊಳ್ಳಲಾಗುವುದಿಲ್ಲ. ರಾತ್ರಿ ಹತ್ತು ಗಂಟೆಯ ನಂತರವೇ ರಿಯಾಲಿಟಿ ಷೋ ಪ್ರಸಾರ ಮಾಡಿ ಎಂಬುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಜನರು ಸಿನಿಮಾ ನೋಡುತ್ತಾರೋ, ರಿಯಾಲಿಟಿ ಷೋ ನೋಡುತ್ತಾರೋ ಎಂಬುದು ಅವರ ಆಯ್ಕೆ. ಯಾವುದು ಚೆನ್ನಾಗಿದೆಯೋ ಅದನ್ನೇ ನೋಡುತ್ತಾರೆ.
–ಪರಮೇಶ್ವರ್ ಗುಂಡ್ಕಲ್, ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್

*
ನಮ್ಮದೇನು ತಪ್ಪಿದೆ?
priyamani kannada actress
priyamani kannada actress

ಸಿನಿಮಾ ಕಲಾವಿದರು ರಿಯಾಲಿಟಿ ಷೋಗಳಲ್ಲಿ ಭಾಗವಹಿಸುವುದರಲ್ಲಿ ತಪ್ಪೇನಿದೆ. ಯಾವುದೋ ಸಿನಿಮಾ ಬಿಡುಗಡೆ ತಡವಾಗುತ್ತಿದ್ದರೆ ಕಲಾವಿದರು ರಿಯಾಲಿಟಿ ಷೋಗಳಲ್ಲಿ ಭಾಗವಹಿಸುವಲ್ಲಿ ಯಾವ ತಪ್ಪಿದೆ. ನಾವು 24×7 ರಿಯಾಲಿಟಿ ಷೋಗಳನ್ನೇ ಮಾಡುವುದಿಲ್ಲ. ಬಿಡುವಿನಲ್ಲಿ, ವಾರದಲ್ಲಿ ಒಂದೆರಡು ದಿನ ಮಾತ್ರ ರಿಯಾಲಿಟಿ ಷೋಗಳಿಗೆ ಸಮಯ ಕೊಡುತ್ತೇವೆ. ಎರಡೂ ಕಡೆ ಸಮತೋಲನ ಸಾಧಿಸಬೇಕು.


–ಪ್ರಿಯಾಮಣಿ, ನಟಿ–ರಿಯಾಲಿಟಿ ಷೋ ತೀರ್ಪುಗಾರ್ತಿ
Fresh Kannada

Fresh Kannada

No comments:

Post a Comment

Google+ Followers

Powered by Blogger.