Breaking News
recent

ಇವನು ಭಾಳಾ ಮೆಂಟ್ಲು ಗುರೂ!

ಬಿಗ್ಬಾಸ್   @bbsk4 ರಿಯಾಲಿಟಿ ಶೋ ಅದ್ದೂರಿಯಾಗಿಯೇ ಆರಂಭಗೊಂಡಿದೆ. ಈ ಸೀಸನ್ ನಾಲಕ್ಕನೇ ಆವೃತ್ತಿಯಲ್ಲಿ ಯಾರ್‍ಯಾರು ಸ್ಪರ್ಧಿಗಳಾಗುತ್ತಾರೆಂಬ ಬಗ್ಗೆ ತಿಂಗಳ ಹಿಂದಿನಿಂದಲೂ ರೂಮರುಗಳೆದ್ದಿದ್ದವು. ಇದನ್ನೇ ಬಳಸಿಕೊಂಡ ಕೆಲ ನಟ ನಟಿಯರು ಈ ರೇಸಲ್ಲಿ ತಮ್ಮ ಹೆಸರನ್ನೂ ಸೇರಿಸಿಕೊಂಡು ಗಾಳಿ ಸುದ್ದಿ ಹಬ್ಬಿಸಿ ಬಿಟ್ಟಿ ಪ್ರಚಾರ ಪಡೆದುಕೊಂಡಿದ್ದೂ ಆಗಿತ್ತು. ಕೆಲವೊಮ್ಮೆ ವಾಹಿನಿಯೇ ಕನ್'ಫ್ಯೂಸ್ ಮಾಡಲೆಂದೇ ಕೆಲವರ ಹೆಸರನ್ನು ತೇಲಿ ಬಿಟ್ಟಿದ್ದೂ ನಡೆಯಿತು. ಆದರೆ ವ್ಯವಹಾರವೂ ಸೇರಿದಂತೆ ನಾನಾ ಕಾರಣಗಳಿಂದಾಗಿ ಪಕ್ಕಾ ನಿಕ್ಕಿಯಾದಂತಿದ್ದ ಒಂದಷ್ಟು ಹೆಸರುಗಳು ಕಡೇ ಘಳಿಗೆಯಲ್ಲಿ ಫಿಲ್ಟರ್ ಆಗಿವೆ. ಅಂತೂ ಇಂತೂ ಇದೀಗ ಹದಿನೈದು ಮಂದಿ ಸ್ಪರ್ಧಿಗಳು ಬಿಗ್'ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಮಾಮೂಲಾಗಿ ಈ ಕಾರ್ಯಕ್ರಮದ ಆಶಯದಂತೆ ಕೀಟಲೆ, ಕಪಿ ಬುದ್ಧಿ ಮುಂತಾದವುಗಳು ಆರಂಭದ ಎಪಿಸೋಡಿನಿಂದಲೇ ಉದ್ಘಾಟನೆಗೊಂಡಿವೆ.
ಕಳೆದ ಸೀಜನ್ನಿನಲ್ಲಿ ಬಿಟ್ಟಿ ಮನರಂಜನೆಗೆ ಹುಚ್ಚಾ ವೆಂಕಟ್ ಇದ್ದ, ಈ ಬಾರಿ ಯಾರಿರ್‍ತಾರೆ ಅಂತ ಕೊರಗುತ್ತಿದ್ದವರಿಗೆ ವರದಾನವೆಂಬಂತೆ ಹುಚ್ಚ ವೆಂಕಟನ ಖಾಸಾ ತಮ್ಮನಂತಿರೋ ಪ್ರಥಮ್ ಎಂಬ ತಲೆಹರ್ಟೆಯೊಬ್ಬ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾನೆ!
pratham
pratham
ಈ ಪ್ರಥಮ್ ಅದ್ಯಾವ ಕೋನದಲ್ಲಿ ಈ ಚಾನೆಲ್ ಮಂದಿಗೆ ಸೆಲೆಬ್ರಿಟಿಯಂತೆ ಕಂಡನೋ ಆ ಭಗವಂತನೇ ಬಲ್ಲ. ಆದರೆ ಈತನ ಆಯ್ಕೆಯ ಹಿಂದೆ ಪಕ್ಕಾ ಟಿಆರ್ಪಿ ಪ್ಲಾನಿಂಗ್ ಇರೋದಂತೂ ನಿಜ. ಆದರೆ ಎಂಟ್ರಿ ಕೊಟ್ಟ ದಿನವೇ ಈತ ಹುಚ್ಚಾ ವೆಂಕಟನನ್ನೇ ನಿವಾಳಿಸಿ ಎಸೆಯುವಂತೆ ಹುಚ್ಚು ಆಟ ಮೆರೆದಿದ್ದಾನೆ. ಒಂದೇ ಏಟಿಗೆ ಇವನು ಸೈಕೋ ಅಂತ ಯಾರಾದರೂ ಸಲೀಸಾಗಿ ನಿರ್ಧರಿಸಿ ಬಿಡುವಂಥಾ ವ್ಯಕ್ತಿತ್ವದ ಈ ಆಸಾಮಿ ಒಂದಷ್ಟು ಕಾಲ ಸದರಿ ವಾಹಿನಿಯ ಟಿಆರ್ಪಿ ಸರಕಾಗುವುದಂತೂ ಸತ್ಯ. ಆದರೆ ಅದುವರೆಗೆ ಈತನ ವೆರೈಟಿ ವೆರೈಟಿ ವಿಕೃತಿಗಳನ್ನು ಸಹಿಸಿಕೊಳ್ಳುವ ದರ್ದು ಕರ್ನಾಟಕದ ಅದ್ಯಾವ ಪ್ರೇಕ್ಷಕರಿಗೆದೆಯೋ ಗೊತ್ತಿಲ್ಲ. ಅಷ್ಟರ ಮಟ್ಟಿಗೆ ಈ ಪ್ರಥಮ್ ದೆಸೆಯಿಂದ ಆರಂಭದಲ್ಲಿಯೇ ಬಿಗ್ ಬಾಸ್ ಮೇಲೆ ಅಪಸ್ವರಗಳೇಳುವಂತಾಗಿದೆ.
ಬಿಗ್ಬಾಸ್ ಎಂಬುದು ಕನ್ನಡಕ್ಕೆ ಬೇಕಿರದ ರಿಯಾಲಿಟಿ ಶೋ ಎಂಬುದು ವಿವಾದಾತೀತ. ಅದ್ಯಾರೋ ಹದಿನೈದು ಮಂದಿಯ ಖಾಸಗಿ ಪ್ರವರ ನೋಡುವ ಖಯಾಲಿ ಇಂಗ್ಲಿಷ್ ಮಂದಿಗಷ್ಟೇ ಲಾಯಕ್ಕು. ಆದರೆ ಇಂಥಾ ಪ್ರತಿರೋಧದ ನಡುವೆಯೂ ಈ ಕಾರ್ಯಕ್ರಮ ಒಂದಷ್ಟು ಕುತೂಹಲ ಉಳಿಸಿಕೊಂಡಿದ್ದು ಖಂಡಿತವಾಗಿಯೂ ಸುದೀಪ್ ಕಾರಣಕ್ಕೆ. ವಾರಕ್ಕೊಂದು ಸಲ ತೆರೆ ಮೇಲೆ ಕಾಣಿಸಿಕೊಂಡು ಸ್ಪರ್ಧಿಗಳ ಅಸಡ್ಡಾಳ ವರ್ತನೆಗಳನ್ನೂ ತಮ್ಮ ಮಾತಿಂದಲೇ ಮರೆ ಮಾಚುವ ಪ್ರಯತ್ನದಲ್ಲಿ ಸುದೀಪ್ ಗೆದ್ದಿದ್ದಾರೆ. ಈವತ್ತಿಗೂ ಬಿಗ್ಬಾಸ್ ಶೋನ ವಿಕೃತಿಗಳನ್ನು ಹಳಿಯುತ್ತಲೇ ಸುದೀಪ್ ಕಾರಣಕ್ಕೆ ಪ್ರೇಕ್ಷಕರಾದವರ ಸಂಖ್ಯೆಯೂ ದೊಡ್ಡದಿದೆ. ಆದರೆ ಸುದೀಪ್ ಕೈಮೀರಿ, ಚಾನಲ್ನ ಟಿಆರ್ಪಿ ಮರ್ಜಿಗೆ ತಕ್ಕಂತೆ ಈ ಕಾರ್ಯಕ್ರಮದಲ್ಲಿ ನಾನಾ ಐಲುಗಳು ಯಥೇಚ್ಚವಾಗಿ ನಡೆಯುತ್ತವೆ. ಅಂಥವು ಈ ಹಿಂದಿನ ಶೋಗಳಲ್ಲಿಯೂ ನಡೆದಿದೆ. ಈ ಸೀಜನ್ನಿನಲ್ಲಿಯೂ ನಡೆಯುತ್ತವೆ!
ಸದ್ಯ ಸ್ಪರ್ಧಿಗಳಾಗಿರುವ ಅಷ್ಟೂ ಜನರಲ್ಲಿ ಕೆಲವೇ ಕೆಲ ಸಹನೀಯ ವ್ಯಕ್ತಿತ್ವಗಳಷ್ಟೇ ಕಾಣಿಸುತ್ತವೆ. ಇಂಥವರಲ್ಲಿ ಮಾತ್ರವೇ ಒಂದಷ್ಟು ಪ್ರಬುದ್ಧ ವರ್ತನೆ ನಿರೀಕ್ಷಿಸಬಹುದೇನೋ. ಅಂಥವರಲ್ಲಿ ಖಾಸಗಿ ವಾಹಿನಿಗಳಲ್ಲಿ ಮನಮುಟ್ಟುವಂತೆ ಶುದ್ಧ ಉಚ್ಛಾರದ ಮೂಲಕ ಸುದ್ದಿ ವಾಚಿಸುತ್ತಿದ್ದ ನಿರೂಪಕಿ ಶೀತಲ್ ಶೆಟ್ಟಿ ಈ ಬಾರಿಯ ಬಿಗ್ ಬಾಸ್ಗೆ ಎರಡನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಸ್ಪಷ್ಟವಾಗಿ ಕನ್ನಡ ಮಾತಾಡುವ ಮಂಗಳೂರು ಹುಡುಗಿ ಶೀತಲ್ ಶೆಟ್ಟಿ ಉಳಿದವರು ಕಂಡಂತೆ ಚಿತ್ರದಲ್ಲಿಯೂ ನಟಿಸಿದ್ದವಳು. ಮಾಧ್ಯಮ ವಲಯದಲ್ಲಿಯೂ ಈಕೆಯ ಬಗ್ಗೆ ಒಳ್ಳೆ ಮಾತುಗಳೇ ಇದ್ದಾವಾದ್ದರಿಂದ ಶೀತಲ್ ನಿರೀಕ್ಷೆ ಹುಟ್ಟಿಸಿದ್ದಾಳೆ. ಇನ್ನುಳಿದಂತೆ ಪಾಪಾ ಪಾಂಡು ಸೀರಿಯಲ್ ನಲ್ಲಿ ಪಾಂಡುಗೆ ಚೆನ್ನಾಗಿ ತದುಕಿ ಎಲ್ಲರನ್ನೂ ನಗುವಂತೆ ಮಾಡುತ್ತಿದ್ದ ನಟಿ ಕಮ್ ನಿರೂಪಕಿ ಶಾಲಿನಿ ಈ ಬಾರಿ ಬಿಗ್ ಬಾಸ್ ಅಡ್ಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದ ಜೊತೆ ಜೊತೆಗೆ ರಾಜಕಾರಣಿಯಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಮಾಳವಿಕಾ ಅವಿನಾಶ್ ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಯಮ್ಮ ತಮಿಳು ನಾಡು ಮತ್ತು ಕರ್ನಾಟಕದ ಮಧ್ಯೆಯೇ ಏನೆಲ್ಲಾ ಫಿಟ್ಟಿಂಗ್ ಇಟ್ಟ ಆರೋಪ ಹೊತ್ತಿದ್ದಾರೆ. ಇನ್ನು ಹದಿನೈದು ಜನರ ಬಿಗ್ ಬಾಸ ಮನೆ ಹೇಗೆ ಹೊತ್ತಿಉರಿಯುತ್ತೋ?
ಇನ್ನುಳಿದಂತೆ ಈ ವಾಹಿನಿಯ ಮಂದಿ ಪಕ್ಕಾ ಟಿಆರ್ಪಿ ಟ್ರಿಕ್ಸಿಗೆ ಮೊರೆ ಹೋಗಿದ್ದಾರೆ. ಆ ಅಜೆಂಡಾದ ಅಡಿಯಲ್ಲಿಯೇ ಕಿರಿಕ್ ಕೀರ್ತಿ ಮತ್ತು ಸೀಮೆಗಿಲ್ಲದ ಸೈಕೋ ನಿರ್ದೇಶಕ ಪ್ರಥಮ್ನನ್ನು ತಂದು ಕೂಡಿ ಹಾಕಿದ್ದಾರೆ. ಪ್ರಥಮ್ಗೆ ಹೋಲಿಸಿದರೆ ಕಿರಿಕ್ ಕೀರ್ತಿ ಬೆಟರ್ ಆಸಾಮಿ. ಯೂ ಟ್ಯೂಬಿನಲ್ಲಿ ಹುಚ್ಚುಚ್ಚಾಗಿ ಅರಚಾಡುತ್ತಲೇ ಒಂದಷ್ಟು ಪ್ರಚಾರಕ್ಕೆ ಬಂದ ಈತನನ್ನು ಫೇಸ್ಬುಕ್ ಸ್ಟಾರ್ ಅನ್ನುವವರೂ ಇದ್ದಾರೆ. ಇದೆಲ್ಲಾ ಏನೇ ಇದ್ದರೂ ಈತ ಭಲೇ ಮಾತುಗಾರ. ಎಂಥವರನ್ನು ಬೇಕಾದರೂ ಮಾತಿಂದಲೇ ಆಟಾಡಿಸುವಂಥಾ ಚಾಲಾಕಿ ಆಸಾಮಿ ಬೇರೆ. ಹೇಳಿ ಕೇಳಿ ಬಿಗ್ಬಾಸ್ ಆಟ ನಿಂತಿರೋದೇ ಇಂಥಾ ಮಾತುಗಾರರು, ಕಿರಿಕ್ ಪಾರ್ಟಿಗಳ ಮೇಲೆ. ಆದ್ದರಿಂದಲೇ ಭಾರೀ ಪ್ಲಾನು ಮಾಡಿ ಕಿರಿಕ್ ಕೀರ್ತಿಯನ್ನು ಸೇರಿಸಿಕೊಳ್ಳಲಾಗಿದೆ. ಈತನಿಂದ ಅಡಸಾಬಡಸಾ ಮಾತುಗಳನ್ನು ಹೊರತಾಗಿಸಿ ಒಂದಷ್ಟು ಪ್ರಬುದ್ಧ ವರ್ತನೆಯನ್ನು ನಿರೀಕ್ಷಿಸಬಹುದೇನೋ. ಆದರೆ ಈ ಪ್ರಥಮ್ ಮಾತ್ರ ನೂರಕ್ಕೆ ನೂರರಷ್ಟು ಸೈಕೋ ಆಸಾಮಿ. ಕಳೆದ ಸಲ ಅಜ್ಞಾತ ಗಾಯಕ ರವಿ ಮೂರೂರನಿಗೆ ಮೂಗಲ್ಲಿ ರಕ್ತ ಇಳಿಯುವಂತೆ ಬಾರಿಸಿದ್ದನಲ್ಲಾ ಹುಚ್ಚಾ ವೆಂಕಟ? ಈ ಸಲ ಈ ಸೈಕೋ ಪ್ರಥಮ್ ಅದ್ಯಾರಿಗೆ ಅದೇನು ಕಂಟಕ ತಂದಿಡ್ತಾನೊ ಎಂಬುದೇ ಅಸಲೀ ಕುತೂಹಲ!
ಅಷ್ಟಕ್ಕೂ ಈ ಪ್ರಥಮ್ ಎಂಬಾತ ಕನ್ನಡ ಚಿತ್ರ ರಂಗದಲ್ಲಿ ಕಡಿದು ಕಟ್ಟೆ ಹಾಕಿದ್ದು ಏನೂ ಇಲ್ಲ. ಈ ಹಿಂದೆ ಒಳ್ಳೇ ಹುಡುಗ ಅಂತೊಂದು ತಗಡು ಸಿನಿಮಾವನ್ನು ನಾನೇ ನಿರ್ದೇಶನ ಮಾಡಿದ್ದು ಅಂತ ಹೇಳಿಕೊಂಡು ಓಡಾಡುವ ಈತ ವರ್ಷಾಂತರಗಳ ಹಿಂದೆ ದೇವ್ರೌನೆ ಬುಡು ಗುರು ಅಂತೊಂದು ಸಿನಿಮಾ ಮಾಡೋದಾಗಿ ಹೇಳಿಕೊಂಡಿದ್ದ. ಆದರೆ ಆ ಚಿತ್ರದ ಹೆಸರಲ್ಲಿ ಪೋಸು ಕೊಟ್ಟನೇ ಹೊರತು ನೆಟ್ಟಗೆ ಚಿತ್ರೀಕರಣ ಮಾಡಲೇ ಇಲ್ಲ.
ಇಂಥಾ ಪ್ರಥಮ್ನದ್ದು ಪಕ್ಕಾ ಸೈಕೋ ಮೆಂಟಾಲಿಟಿ. ಎದುರಿಗೆ ಎಷ್ಟೇ ಸ್ಟ್ರಾಂಗು ಮನುಷ್ಯರು ನಿಂತಿದ್ದರೂ ಮಾತಲ್ಲಿಯೇ ಕೊಂದು ಹಾಕುವಂಥಾ ಬಾಯಿಬಡುಕ. ಮಾತೆಂಬುದು ಈತನಿಗೆ ಪಕ್ಕಾ ಕಾಯಿಲೆ ಇದ್ದಂತೆ. ಅರ್ಜೆಂಟಿಗೆ ಉಚ್ಚೆ ಹುಯ್ಯಲು ನಿಂತರೆ ಕಾಂಪೌಂಡನ್ನೂ ಕರೆದು ಮಾತಾಡಿಸಬಲ್ಲ ಈ ಮಳ್ಳು ಗಿರಾಕಿಯದ್ದು ಮೂಲತಃ ಮೈಸೂರು. ಒಂದಷ್ಟು ಬುದ್ಧಿವಂತನೇ ಆಗಿದ್ದ ಈತ ಎಂಜಿನಿರಿಂಗ್ ಸ್ಟೂಡೆಂಟು. ಓದಿದ್ದು ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ. ಆದರೆ ಅದನ್ನು ಕಂಪ್ಲೀಟ್ ಮಾಡಿರೋ ವರ್ತಮಾನಗಳಿಲ್ಲ. ಮಾತಾಡಿ ಮಾತಾಡಿ ಇವನು ಅದೆಂಥಾ ರೇಜಿಗೆ ಹುಟ್ಟಿಸಬಲ್ಲನೆಂದರೆ ಹುಟ್ಟಿಸಿದ ಅಪ್ಪನೇ ಈತನೊಂದಿಗೆ ಮಾತು ಬಿಟ್ಟು ಬರೋಬ್ಬರಿ ಒಂಬತ್ತು ಸಂವತ್ಸರಗಳು ಕಳೆದಿವೆ!
ಈ ಥರದ ಹಿನ್ನೆಯ ಪ್ರಥಮ್ಗೆ ಆರಂಭದಿಂದಲೂ ಸಿನಿಮಾ ಹುಚ್ಚು. ದೊಡ್ಡ ಮನುಷ್ಯರೆನ್ನಿಸಿಕೊಂಡವರೆಲ್ಲ ತನಗೆ ಕ್ಲೋಸಾಗಿರಬೇಕೆಂಬ ತುಡಿತದ ಈತ ಸರ ಹೊತ್ತಿನಲ್ಲಿ ಯಾವ ರಾಜಕಾರಣಿಗಳ ಮನೆಗಾದರೂ ನುಗ್ಗಬಲ್ಲ. ಮಾಜೀ ಪ್ರಧಾನಿ ದೇವೇಗೌಡರೊಂದಿಗೊಂದು ಫೋಟೋ ತೆಗೆಸಿಕೊಂಡು `ಇವರು ನನ್ನ ತಾತ ಅಂತ ಫೇಸ್ಬುಕ್ಕಲ್ಲಿ ಪೋಸು ಕೊಟ್ಟು ಬೆಚ್ಚಿ ಬೀಳಿಸಬಲ್ಲ. ಮಾಜೀ ಮುಖ್ಯಮಂತ್ರಿಗಳಿಗೆಲ್ಲ ಅಳೀಮಯ್ಯನಾಗಿ ಕಂಗಾಲಾಗಿಸ ಬಲ್ಲ. ಏಕಾಏಕಿ ಸ್ಟಾರ್ ಗಳ ಮನೆಗೆ ಸ್ವೀಟ್ ಬಾಕ್ಸಿನ ಸಮೇತ ನುಗ್ಗಿ, ಅವರ ಬಾಯಿಗೆ ಸ್ವೀಟು ತುರುಕಿ, ಅವರೊಟ್ಟಿಗೇ ಸೆಲ್ಫೀ ತೆಗೆದುಕೊಂಡು ಫೇಸ್ ಬುಕ್ಕಿನ ವಾಲಿಗೆ ಮೆತ್ತುವುದು ಇವನ ಕಸುಬು. ಇಂಥವನಿಗೆ ಸಿನಿಮಾ ಎಂಬುದು ಕನಸಲ್ಲ ಖಯಾಲಿ.
ಬಿಗ್ಬಾಸ್ ಮನೆಗೆ ಅಡಿಯಿಟ್ಟ ದಿನವೇ ಸೈಕೋನಂತಾಡಿದ ಈತ ಓಟೌಟ್ ಆಗಿದ್ದ. ಆದರೆ ಈತನನ್ನು ಈ ಕಾರ್ಯಕ್ರಮದ ಮಂದಿ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಒಳಗಿಟ್ಟುಕೊಳ್ಳುತ್ತದೆ. ಈತನಿಂದ ಥರ ಥರದ ಕೋತಿ ಚೇಷ್ಟೆ ಮಾಡಿಸುತ್ತದೆ. ಕರೆಕ್ಟಾಗಿ ಕಳೆದ ಸಲ ಹುಚ್ಚ ವೆಂಕಟನಿದ್ದ ಸ್ಥಾನವನ್ನು ಈತ ತುಂಬಿದ್ದಾನೆ. ಈ ವಾಹಿನಿ ಈತನ ಹುಚ್ಚನ್ನು ಮತ್ತಷ್ಟು ಉದ್ದೀಪನಗೊಳಿಸಿ ಹೊರಗೆ ಸಾಗಹಾಕುತ್ತದೆ. ಪ್ರತೀ ಸೀಜನ್ನಿಗೂ ಇಂಥಾ ಹುಚ್ಚರನ್ನೇ ಹಾಕಿಕೊಂಡರೆ ಖಂಡಿತವಾಗಿಯೂ ಈ ಶೋದ ಅಳಿದುಳಿದ ಮಾನವೂ ಹರಾಜಾಗುತ್ತದೆ!
Fresh Kannada

Fresh Kannada

No comments:

Post a Comment

Google+ Followers

Powered by Blogger.