Breaking News
recent

ಸೆ.18ಕ್ಕೆ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬ: ಭುಗಿಲೆದ್ದ ಹೊಸ ವಿವಾದ ಏನು?

ಸೆಪ್ಟೆಂಬರ್ 18 ಬಂತೂಂದ್ರೆ ಸ್ಯಾಂಡಲ್ ವುಡ್ ಸಿಂಹಾಭಿಮಾನಿಗಳಿಗೆ ಹರುಷದ ಹಬ್ಬ. ಯಾಕಂದ್ರೆ, ಅಂದು ಡಾ.ವಿಷ್ಣುವರ್ಧನ್ ರವರ ಜನ್ಮದಿನೋತ್ಸವ. 'ದಿ ಮ್ಯಾನ್ ಆಫ್ ಮಿಲಿಯನ್ ಹಾರ್ಟ್ಸ್', 'ಕೋಟಿಗೊಬ್ಬ' ನಮ್ಮನ್ನೆಲ್ಲಾ ಅಗಲಿ ವರ್ಷಗಳೇ ಉರುಳಿದರೂ ಅಭಿಮಾನಿಗಳ ಹೃದಯದಲ್ಲಿ ಮಾತ್ರ 'ಯಜಮಾನ'ನ ಹುಟ್ಟುಹಬ್ಬದ ಸಂಭ್ರಮ ಜೋರಾಗಿರುತ್ತದೆ.
vishnuvardhan images
ಅಂದು ವಿಷ್ಣುವರ್ಧನ್ ರವರ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ವಿಷ್ಣು ಜನ್ಮದಿನವನ್ನ ಅದ್ಧೂರಿಯಾಗಿ ಆಚರಿಸುತ್ತಾರೆ. ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್ ಕೂಡ ಅಲ್ಲಿಗೆ ಭೇಟಿ ಕೊಟ್ಟು, ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸುತ್ತಾರೆ. ವಿಷ್ಣು ಹೆಸರಲ್ಲಿ ಅಂದು ರಕ್ತದಾನ, ಆರೋಗ್ಯ ತಪಾಸಣೆ ಶಿಬಿರ ಕೂಡ ಏರ್ಪಡಿಸಲಾಗುತ್ತದೆ.
ಕಳೆದ ಆರು ವರ್ಷಗಳಿಂದ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬ ನಡೆಯುತ್ತಿರುವುದು ಹೀಗೆ...ಆದ್ರೆ ಈ ಬಾರಿ ಯಥಾಸ್ಥಿತಿ ಮುಂದುವರೆಯುವುದಿಲ್ಲ. ಕಾರಣ ಭಾರತಿ ವಿಷ್ಣುವರ್ಧನ್ ರವರ ಅನುಪಸ್ಥಿತಿ.!

ಅಭಿಮಾನ್ ಸ್ಟುಡಿಯೋಗೆ ಕಾಲಿಡಲ್ಲ ವಿಷ್ಣು ಪತ್ನಿ
ಇದೀಗ ಬಂದಿರುವ ಮಾಹಿತಿ ಪ್ರಕಾರ, ವಿಷ್ಣುವರ್ಧನ್ ರವರ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋಗೆ ಭಾರತಿ ವಿಷ್ಣುವರ್ಧನ್ ಕಾಲಿಡುವುದಿಲ್ಲವಂತೆ.

ಹುಟ್ಟುಹಬ್ಬಕ್ಕೆ ಗೈರು 
ಡಾ.ವಿಷ್ಣುವರ್ಧನ್ ರವರ ಹುಟ್ಟುಹಬ್ಬದಂದು (ಸೆಪ್ಟೆಂಬರ್ 18) ಕೂಡ ಅಲ್ಲಿಗೆ ಭಾರತಿ ವಿಷ್ಣುವರ್ಧನ್ ಹಾಗೂ ಅಳಿಯ ಅನಿರುದ್ಧ ಹೋಗುವುದಿಲ್ಲವಂತೆ.

ಕಾರಣ ಏನು? 
ಅಭಿಮಾನ್ ಸ್ಟುಡಿಯೋ ಮಾಲೀಕರಾಗಿರುವ ನಟ ಬಾಲಕೃಷ್ಣ ರವರ ಮಕ್ಕಳು ಡಾ.ವಿಷ್ಣುವರ್ಧನ್ ರವರಿಗೆ ಅವಮಾನ ಆಗುವ ರೀತಿಯಲ್ಲಿ ಮಾತನಾಡಿರುವ ಕಾರಣ ಅತ್ತ ಹೋಗಲೇಬಾರದು ಅಂತ 'ಆಪ್ತಮಿತ್ರ'ನ ಕುಟುಂಬ ನಿರ್ಧರಿಸಿದೆ.

ಅನಿರುದ್ಧ್ ಏನಂತಾರೆ? 
''ನಮ್ಮ ಅಪ್ಪ (ವಿಷ್ಣುವರ್ಧನ್) ಬಗ್ಗೆ ಬಾಲಣ್ಣ ರವರ ಮಗ ಶ್ರೀನಿವಾಸ್ ಬಹಳ ಕೆಟ್ಟದಾಗಿ ಮಾತನಾಡಿದ್ದಾರೆ. ಅವಮಾನ ಆಗುವ ಜಾಗದಲ್ಲಿ ಅಪ್ಪ ರವರು ಯಾವತ್ತೂ ಇರ್ತಿಲಿಲ್ಲ. ಸ್ಮಾರಕ ನಿರ್ಮಾಣದ ಬಗ್ಗೆ ಇಷ್ಟು ವರ್ಷದಿಂದ ಪ್ರಯತ್ನ ಪಟ್ಟರೂ ಆಗ್ತಿಲ್ಲ. ಜೊತೆಗೂ ಅವಮಾನ ಕೂಡ ಆಯ್ತು. ಇಷ್ಟೆಲ್ಲಾ ಆದ್ಮೇಲೆ ಆ ಕಡೆ ಹೋಗುವುದು ಬೇಡ ಅಂತ ನಾವು ನಿರ್ಧಾರ ಮಾಡಿದ್ದೇವೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ವಿಷ್ಣುವರ್ಧನ್ ರವರ ಅಳಿಯ ಅನಿರುದ್ಧ್ ತಿಳಿಸಿದರು.

ಋಣಾನುಬಂಧ ಮುಗಿಯಿತು!
''ಅಭಿಮಾನ್ ಸ್ಟುಡಿಯೋದಲ್ಲಿ ನಮ್ಮ ಋಣಾನುಬಂಧ ಮುಗಿಯಿತು. ಅಪ್ಪ ರವರು ಅಲ್ಲಿ ಇಲ್ಲ ಅಂತ ನಮಗೆ ಗೊತ್ತಾಗಿದೆ. ಯಾಕಂದ್ರೆ ಅವಮಾನ ಮಾಡಿಸಿಕೊಂಡು ಅವರು ಯಾವತ್ತೂ ಒಂದು ಕ್ಷಣ ಇರ್ತಿಲಿಲ್ಲ'' - ಅನಿರುದ್ಧ್

ಎಷ್ಟೇ ಪ್ರಯತ್ನ ಪಟ್ಟರೂ ಆಗ್ಲಿಲ್ಲ! 
''ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣದ ಕುರಿತು ಕೋಟಿ ಪ್ರಯತ್ನ ಪಟ್ಟಿದ್ದೇವೆ. ನಮ್ಮ ಕಾಲುಗಳೇ ಸವೆದುಹೋಗಿದೆ. ಮೂರು ವರ್ಷಗಳ ಹಿಂದೆಯೇ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡ್ಬೇಕು ಅಂತ ಯೋಚನೆ ಮಾಡಿದ್ವಿ. ಆದ್ರೆ, ಅಭಿಮಾನಿಗಳೆಲ್ಲಾ ರೊಚ್ಚಿಗೆದ್ದರು. ಅದರಿಂದ ಮತ್ತೆ ಬೆಂಗಳೂರಿನಲ್ಲೇ ಪ್ರಯತ್ನ ಪಟ್ವಿ. ಆಗ ಮೈಸೂರಿನಲ್ಲಿ ಸಿಕ್ಕ ಜಾಗ ಕಳೆದುಕೊಂಡ್ವಿ. ಬೆಂಗಳೂರಿನಲ್ಲೂ ಆಗ್ತಾನೇ ಇಲ್ಲ. ಹೀಗೆ ಮುಂದುವರೆದರೆ ಯಾವುದೂ ಆಗಲ್ಲ'' - ಅನಿರುದ್ಧ್

ವೈಯುಕ್ತಿಕ ಲಾಭ ಏನೂ ಇಲ್ಲ!
''ಈಗ ಮೈಸೂರಿನಲ್ಲಿ ಜಾಗ ಆಗಿದೆ. ಸರ್ಕಾರದಿಂದ ಅನುಮತಿ ಕೂಡ ಸಿಕ್ಕಿದೆ. ಡಾ.ವಿಷ್ಣುವರ್ಧನ್ ಪ್ರತಿಷ್ಟಾನ ಟ್ರಸ್ಟ್ ಅಂತ ಸರ್ಕಾರ ಮಾಡಿಧೆ. ಅದಕ್ಕೆ 11 ಕೋಟಿ ರೂಪಾಯಿಯನ್ನ ಸರ್ಕಾರ ನೀಡಿದೆ. ಈ ಟ್ರಸ್ಟ್ ಗೆ ಮಾನ್ಯ ಮುಖ್ಯಮಂತ್ರಿಗಳೇ ಅಧ್ಯಕ್ಷರು. ಅಮ್ಮ (ಭಾರತಿ ವಿಷ್ಣುವರ್ಧನ್) ಅದರಲ್ಲಿ ಟ್ರಸ್ಟಿ. ಟ್ರಸ್ಟ್ ಮುಖಾಂತರ ಏನೇ ಆದರೂ, ಅದರಿಂದ ಬರುವ ದುಡ್ಡು ಸರ್ಕಾರಕ್ಕೆ ಹೋಗುತ್ತದೆ. ವೈಯುಕ್ತಿಕ ಸ್ವಾರ್ಥ ಇದರಲ್ಲಿ ಶೂನ್ಯ'' - ಅನಿರುದ್ಧ್

ಮನೆಯಲ್ಲಿ ಆಚರಣೆ
''ಅಪ್ಪ ರವರ ಹುಟ್ಟುಹಬ್ಬವನ್ನ ಮನೆಯಲ್ಲೇ ಮಾಡ್ತೀವಿ. ಅಪ್ಪ ರವರಿಗೆ ಪೂಜೆ ಸೇರಿದಂತೆ ಅನ್ನ ಸಂತರ್ಪಣೆ ಕೂಡ ಮಾಡ್ತೀವಿ. ವಿಭಾ ಟ್ರಸ್ಟ್ ಮೂಲಕ ಅಪ್ಪ ರವರೇ ನಮ್ಮ ಕೈಯಲ್ಲಿ ಒಳ್ಳೆ ಕೆಲಸಗಳನ್ನ ಮಾಡಿಸುತ್ತಿದ್ದಾರೆ. ಅಪ್ಪ ರವರು ನಮ್ಮ ಜೊತೆಯಲ್ಲೇ ಇದ್ದಾರೆ ಅಂತ ನಾವು ನಂಬಿದ್ದೀವಿ'' - ಅನಿರುದ್ಧ್

ವಿಷ್ಣು ಅಭಿಮಾನಿಗಳು ಏನಂತಾರೆ? 
''ಶ್ರೀನಿವಾಸ್ ರವರು ಅವಮಾನ ಆಗುವ ರೀತಿಯಲ್ಲಿ ಮಾತನಾಡಿದ್ದರು ನಿಜ. ನಂತರ ಅವರು ಬಂದು ಕ್ಷಮೆ ಕೇಳಿದ್ದಾರೆ. ಬೈದಿರುವುದನ್ನ ಪರಿಗಣಿಸಬೇಕಾದರೆ ಕ್ಷಮೆ ಕೇಳಿರುವುದನ್ನು ಕೂಡ ಪರಿಗಣಿಸಬೇಕು. ಅದನ್ನೇ ಕಾರಣವಾಗಿಟ್ಟುಕೊಂಡು ಹುಟ್ಟುಹಬ್ಬಕ್ಕೆ ಬರಲ್ಲ ಅಂತಿದ್ದಾರೆ. ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ನಾವು ಆಚರಿಸುತ್ತೇವೆ ಹೊರತು, ಭಾರತಿ ವಿಷ್ಣುವರ್ಧನ್ ರವರನ್ನ ನೋಡಿಕೊಂಡು ಯಾವತ್ತೂ ಮಾಡಿಲ್ಲ. ವಿಷ್ಣು ಸೇನಾ ಸಮಿತಿ ಈ ಬಾರಿ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬವನ್ನ ಎಂದಿನ ಸ್ಟೈಲ್ ನಲ್ಲಿ ಅಷ್ಟೇ ಅದ್ಧೂರಿ ಆಗಿ ಆಚರಿಸುತ್ತೇವೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.


Fresh Kannada

Fresh Kannada

No comments:

Post a Comment

Google+ Followers

Powered by Blogger.