Breaking News
recent

ಒಳಿತು ಕೇಡಿನ ನಡುವೆ ಸೇಡಿನ ಸಾಮಾನ್ಯ ವ್ಯೂಹ

ಯುದ್ಧದಲ್ಲಿ ಚಕ್ರವ್ಯೂಹವನ್ನು ರಚಿಸುವುದಾಗಲೀ ಅಥವಾ ಅದನ್ನು ಭೇದಿಸುವುದಾಗಲೀ ತ್ರಾಸದಾಯಕ ಮತ್ತು ಅತಿ ಹೆಚ್ಚಿನ ಕೌಶಲ್ಯವನ್ನು ಬೇಡುತ್ತದೆ. ಕಥೆಗಳಲ್ಲಿ ಕೂಡ ಚಕ್ರವ್ಯೂಹ ರಚಿಸುವುದು ಅಷ್ಟು ಸುಲಭದ ಮಾತಲ್ಲ! ತಮಿಳಿನ ಮೂಲ ಕಥೆಯ ಚಕ್ರವ್ಯೂಹ ಹೇಗಿತ್ತೋ ಹಾಗೆಯೇ ಈ ರಿಮೇಕ್ ಸಿನೆಮಾದಲ್ಲಿ ಅದನ್ನು ನಕಲು ಮಾಡಲು ನಿರ್ದೇಶಕ ಸರವಣನ್ ಅವರಿಗೆ ಸಾಧ್ಯವಾಗಿರಬಹುದು ಆದರೆ 'ಚಕ್ರವ್ಯೂಹ'ದ ಕಥಾ-ಸಿನೆಮಾ ರಚನೆ ನಿಜಕ್ಕೂ ಕುತೂಹಲ ಕಾಯ್ದುಕೊಳ್ಳುತ್ತದೆಯೇ ಮತ್ತು ಅದನ್ನು ನಟ ಪುನೀತ್ ರಾಜಕುಮಾರ್ ಬೇಧಿಸುವುದು ಪ್ರೇಕ್ಷಕನಿಗೆ ರೋಚಕತೆ ನೀಡುತ್ತದೇಯೇ?
Chakravyuha Kannada Reviews

ಕಟ್ಟಡ ನಿರ್ಮಾಣ ಎಂಜಿನಿಯರ್ ಲೋಹಿತ್ (ಪುನೀತ್ ರಾಜಕುಮಾರ್) ಮಾರು ವೇಶದಲ್ಲಿ ಓಂಕಾರ್ (ಅರುಣ್ ವಿಜಯ್) ಜೊತೆಗೆ ಫೈಟ್ ಮಾಡಿ ಅವನನ್ನು ಅಪಹರಿಸಿ, ನಿರ್ಮಾಣ ಹಂತದಲ್ಲಿರುವ ಬೃಹತ್ ಕಟ್ಟಡವೊಂದರಲ್ಲಿ ಕೂಡಿ ಹಾಕುವುದರಿಂದ ಆರಂಭವಾಗುವ ಚಕ್ರವ್ಯೂಹ ಇದೊಂದು ಆಕ್ಷನ್ ಸಿನೆಮಾ ಎಂಬುದನ್ನು ಮೊದಲೇ ಎಸ್ಟಾಬ್ಲಿಶ್ ಮಾಡುತ್ತದೆ. ನಂತರ ಈ ಅಪಹರಣಕ್ಕೆ ಕಾರಣವಾಗುವ ಒಂದು ವಾರದ ಹಿಂದಿನ ಕಥೆಗೆ ಚಲಿಸಿ ಮತ್ತೆ ಮುಂದಕ್ಕೆ ಬಂದು ಸೀದಾ ಸಾದಾವಾಗಿ ಮುಂದುವರೆದು ಚಕ್ರವ್ಯೂಹದಂತಹ ತಿರುವುಗಳುಳ್ಳ-ರೋಚಕತೆಯುಳ್ಳ ಕಥೆ ನಿರೀಕ್ಷಿಸಿದವರಿಗೆ ತುಸು ನಿರಾಸೆ ಉಂಟು ಮಾಡುತ್ತದೆ.

ಕಾನೂನು ಕಾಲೇಜಿನಲ್ಲಿ ಸಚಿವನ ಕೋಟಾದಡಿ ಕಾನೂನು ಸಚಿವ ಸದಾಶಿವಯ್ಯನ (ಅಭಿಮನ್ಯು ಸಿಂಗ್) ಹೆಚ್ಚಿನ ಸೀಟು ಕೋರಿಕೆಯನ್ನು ಪ್ರಾಂಶುಪಾಲ ನಿರಾಕರಿಸುವುದರಿಂದ ಕುಪಿತಗೊಳ್ಳುವ ಸಚಿವ ಕಾಲೇಜಿನಲ್ಲಿ ದಂಗೆ ಎಬ್ಬಿಸುತ್ತಾನೆ. ಈ ದಂಗೆಯಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪುತ್ತಾರೆ. ಈ ದಂಗೆಯಲ್ಲಿ ಸದಾಶಿವಯ್ಯನ ತಮ್ಮ ಜೈಲಿನಿಂದ ಪೆರೋಲ್ ಪಡೆದು ಬಂದಿರುವ ಓಂಕಾರ್ ಕೂಡ ಭಾಗಿಯಾಗಿರುತ್ತಾನೆ. ಹೀಗೆ ಕ್ಷಣಾರ್ಧದಲ್ಲಿ ಯಾವುದೇ ಯೋಜನೆಯಿಲ್ಲದೆ ದಂಗೆಯಾಗುವುದು, ವಿದ್ಯಾರ್ಥಿಗಳು ಹೊಡೆದಾಡಿಕೊಂಡು ಕೊಲೆಯಾಗುವುದನ್ನು ಪೊಲೀಸರು-ಇನ್ಸ್ಪೆಕ್ಟರುಗಳು ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಂತಿರುವುದು ಮತ್ತು ಅವರನ್ನು ಕೆಲವು ದೃಷ್ಟಿ ದೋಷದ ಬಾಲಕರು ನಿಂದಿಸುವುದು ಇಂತಹ ಸಿಲ್ಲಿ ಎನ್ನಬಹುದಾದ ದೃಶ್ಯಗಳನ್ನು ಪ್ರೇಕ್ಷಕನ ಮೇಲೆ ನಿರ್ದೇಶಕ ಹೇರಿದರೂ, ಎಡಿಟಿಂಗ್ ಕೈಚಳಕ ಮತ್ತು ವೇಗದ ನಿರೂಪಣೆಯಿಂದ ಪ್ರೇಕ್ಷನಿಗೆ ಆಗುವ ಆಯಾಸವನ್ನು ಸಿನೆಮಾ ತಪ್ಪಿಸುತ್ತಾ ಹೋಗುತ್ತದೆ.

ಹೀಗೆ ಒಳಿತು (ಲೋಹಿತ್) ಮತ್ತು ಕೇಡಿನ (ಓಂಕಾರ್-ಸದಾಶಿವಯ್ಯ ಜೋಡಿ) ಎಸ್ಟಾಬ್ಲಿಶ್ಮೆಂಟ್ ಮೊದಲರ್ಧ ಘಂಟೆಯಲ್ಲಿ ನಡೆದು ಹೋಗಿ, ಒಳಿತಿನಲ್ಲಿ ಕೆಡುಕಿನ ಮೇಲೆ ಸಿಟ್ಟು-ಹಗೆ ತುಂಬುವ ದೃಶ್ಯ ಕೂಡ ಮಂಕಾಗಿಯೇ ಮೂಡಿ ಬಂದಿದೆ. ಲೋಹಿತ್ ಕಾನೂನು ವಿದ್ಯಾರ್ಥಿಯೊಬ್ಬನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದರೂ ಅವನು ಅಸುನೀಗುತ್ತಾನೆ. ಆಗ ಅವರ ಶಿಕ್ಷಕಿ ತಾಯಿ(ಸಿತಾರ) ರಸ್ತೆಯಲ್ಲಿ ನಿಂತು ತನಗಾದ ಅನ್ಯಾಯದ ಬಗ್ಗೆ ಭಾಷಣ ನೀಡಿ ಇದನ್ನು ಸರಿಪಡಿಸಲು ಸಾರ್ವಜನಿಕನೊಬ್ಬ ಬರುತ್ತಾನೆ ಎಂಬ ಕೂಗುವ ಘೋಷಣೆಯನ್ನು ಲೋಹಿತ್ ತನ್ನ ಮೇಲೆಯೇ ಆರೋಪಿಸಿಕೊಳ್ಳುತ್ತಾನೆ. ಇದು ತಾರ್ಕಿಕವಾಗಿ ನಿರೂಪಣೆಗೆ ಸಹಕಾರಿಯಾಗಿದ್ದರೂ, ಮಗನನ್ನು ಕಳೆದುಕೊಂಡ ತಾಯಿಯ ತಕ್ಷಣದ ಭಾವನೆಗಳನ್ನು ಹಿಡಿದಿಡುವ ಇಮ್ಯಾಜಿನೇಶನ್ ನಿರ್ದೇಶಕನಿಗೆ ಇಲ್ಲವಾಗಿದೆ. "ಆಟೋ ಡ್ರೈವರ್ ಗೆ ತೊಂದರೆಯಾದರೆ ಉಳಿದ ಆಟೋ ಡ್ರೈವರ್ ಗಳು ಸಹಾಯ ಮಾಡುತ್ತಾರೆ, ರಾಜಕಾರಿಣಿಗೆ ತೊಂದರೆಯಾದರೆ ಪಕ್ಷದವರು ಬೆಂಬಲಕ್ಕೆ ನಿಲ್ಲುತ್ತಾರೆ ಆದರೆ ಸಾರ್ವಜನಿಕರಿಗೆ ತೊಂದರೆಯಾದರೆ ಮತ್ತೊಬ್ಬ ಸಾರ್ವಜನಿಕ ಸಹಾಯ ಮಾಡುವುದಿಲ್ಲ" ಎಂಬಂತಹ ಸಂಭಾಷಣೆಗಳು ಪೇಲವವಾಗಿವೆ. [ನಾಯಕಿ ನಾಯಕನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಾಗ ಕೂಡ ಇಂತಹುದೇ ಪಿಚ್ಚೆನಿಸುವ ಭಾಷಣವನ್ನು ನಾಯಕ ಮಾಡುತ್ತಾನೆ]. ಸಂಭಾಷಣೆಯಲ್ಲಿ ಅಲ್ಲಲ್ಲಿ ಎಡವಿರುವುದು ಢಾಳವಗಿದೆ. ಮಗನನ್ನು ಕಳೆದುಕೊಂಡ ತಾಯಿ ತಾನು ಕಟ್ಟಿರುವ ಟ್ಯಾಕ್ಸ್ ಬಗ್ಗೆ ಮಾತನಾಡಿ ಇದಕ್ಕಾಗಿ ಸರ್ಕಾರದವರು ಉತ್ತರಿಸಬೇಕೆಂದು ಹೇಳುವುದು ನಿರ್ದೇಶಕನ ಕಲ್ಪನೆ ವೈಪರೀತ್ಯಕ್ಕೆ ಹೋಗಿದೆಯೇ ಎಂದೆನಿಸುತ್ತದೆ.

ನಂತರ ಕೇಡು, ಒಳಿತಿನ ನಿಜ ಚಹರೆಯನ್ನು ಹೇಗೆ ಕಂಡು ಹಿಡಿಯುತ್ತದೆ ಮತ್ತು ಒಳಿತು ಕೆಡುಕನ್ನು ಹೇಗೆ ಸಂಹರಿಸುತ್ತದೆ ಎಂಬ ಕಥೆಯ ಜೊತೆಗೆ ಈ ವ್ಯೂಹದೊಳಗೆ ಸಿಕ್ಕಿ ಹಾಕಿಕೊಂಡಿರುವ ಅಂಜಲಿ (ರಚಿತಾ ರಾಮ್) ಮತ್ತು ಲೋಹಿತ್ ಲವ್ ಟ್ರ್ಯಾಕ್ ಕೂಡ ಸೇರಿಕೊಳ್ಳುತ್ತದೆ.

ಈ ಸಾಧಾರಣ ಕಥೆಯನ್ನು, ಬಹುತೇಕ ಎಲ್ಲರ ಡೀಸೆಂಟ್ ನಟನೆ, ಒಳ್ಳೆಯ ಸಿನೆಮ್ಯಾಟೋಗ್ರಫಿ ಮತ್ತು ಸಂಕಲನ ಚತುರತೆಯಿಂದಾಗಿ ಯಾವುದನ್ನೂ ಅತಿರೇಕವನ್ನಾಗಿಸದೆ ಮತ್ತೆ ಕೆಲವು ಅತಿರೇಕಗಳನ್ನು ಮೊಟಕುಗಳಿಸಿ (ರಂಘಾಯಣ ರಘು ಮತ್ತು ಸಾಧುಕೋಕಿಲಾ ಅವರ ಎಂದಿನ ಸೆಕ್ಸಿಸ್ಟ್ ಸಂಬಾಷಣೆಗಳು) ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಸಿನೆಮಾ ರಸದೌತಣವಾಗಿ ಮೂಡುತ್ತದೆ. ಪುನೀತ್ ಆಕ್ಷನ್ ದೃಶ್ಯಗಳು ಮತ್ತು ನೃತ್ಯಗಳಲ್ಲಿ ರಂಜಿಸಿ ಮತ್ತೆ ಹೇರಳವಾದ ಶಿಳ್ಳೆ ಚಪ್ಪಾಳೆಗಳನ್ನು ಪಡೆಯುತ್ತಾರೆ. ರಚಿತಾ ರಾಮ್ ಕೂಡ ಮುದ್ದು ಹುಡುಗಿಯ ಪಾತ್ರದಲ್ಲಿ ಒಳ್ಳೆಯ ಅಭಿನಯ ನೀಡಿದ್ದು ನೃತ್ಯದಲ್ಲಿ ಕೂಡ ಗಮನ ಸೆಳೆಯುತ್ತಾರೆ. ತಮಿಳಿನಿಂದ ಬಂದಿರುವ ನಟ ಅರುಣ್ ವಿಜಯ್ ವಿಕೃತ ವಿಲನ್ ಪಾತ್ರದಲ್ಲಿ ಗಮನಾರ್ಹ ಅಭಿನಯ ನೀಡಿರುವುದು ಕೂಡ ಸಿನೆಮಾದ ಹೈಲೈಟ್. ಆಕ್ಷನ್-ಸೇಡಿನ ಸಿನೆಮಾಗೆ ಬೇಕಾದ ಲೋಕೇಶನ್ ಗಳು (ರಸ್ತೆಗಳಲ್ಲಿ ಚೇಸಿಂಗ್ ಮತ್ತು ಬಣಗುಡುವ ನಿರ್ಮಾಣ ಹಂತದ ಬೃಹತ್ ಕಟ್ಟಡಗಳು), ಅದಕ್ಕೆ ತಕ್ಕನಾದ ಛಾಯಾಗ್ರಹಣ-ಕೋನ, ವೇಗದ ನಿರೂಪಣೆ ಮತ್ತದಕ್ಕೆ ಪೂರಕವಾದ ತೊಡಕಿಲ್ಲದ ಸಂಕಲನ ಕೂಡ ಸಿನೆಮಾಗೆ ಸಹಕರಿಸಿವೆ. ಒಂದೆರಡು ಹಾಡುಗಳು ಪರವಾಗಿಲ್ಲ ಎನ್ನಬಹುದಾದರೂ ತೆಲುಗು ನಟ ಜೂನಿಯರ್ ಎನ್ ಟಿ ಆರ್ ಹಾಡಿರುವ ಉಚ್ಛಾರಣಾ ದೋಷಪೂರಿತ ಹಾಡು ಪ್ರೇಕ್ಷಕನನ್ನು ರಿಪೆಲ್ ಮಾಡುತ್ತದೆ. ಇದು ಸಿನೆಮಾದಲ್ಲಿ ಕೂಡ ಅನಗತ್ಯವಾಗಿ ಮೂಡಿ ಬಂದಿದೆ.
ಅಂತೂ ತಮಿಳಿನಲ್ಲಿ ತಾವೇ ನಿರ್ದೇಶಿಸಿದ್ದ 'ಇವನ್ ವೇರ ಮಾಥಿರಿ' (ಇವನು ಬೇರೆ ರೀತಿ) ಎಂಬ ಸಿನೆಮಾವನ್ನು ಕನ್ನಡದಲ್ಲಿ ಹಾಗೆಯೇ ಅಚ್ಚಿಳಿಸಿರುವ ಸರವಣನ್ ಅವರ 'ಚಕ್ರವ್ಯೂಹ' ಒಂದು ನೋಟಕ್ಕೆ ಪುನೀತ್ ಅಭಿಮಾನಿಗಳಿಗೆ ರಸಸ್ವಾದವಾದರು, ಹೊರ ಬಂದ ಮೇಲೆ ಕೆಲವು ಪ್ರಶ್ನೆಗಳು ಎದ್ದು, ಇನ್ನೂ ಬಹಳಷ್ಟು ಸುಧಾರಿಸಿಕೊಳ್ಳಬಹುದಿತ್ತು ಎಂದೆನಿಸದೆ ಇರದು. 'ಚಕ್ರವ್ಯೂಹ'ಕ್ಕೆ ತಮಿಳು ಸಿನೆಮಾ ಮಾದರಿಯಾಗಿರುವುದರಿಂದ ಒರಿಜಿನಲ್ ಹುಡುಕಿ ಹೊರಟವರಿಗೆ ಕೂಡ ನಿರಾಶೆ ಕಟ್ಟಿಟ್ಟ ಬುತ್ತಿ!
Fresh Kannada

Fresh Kannada

No comments:

Post a Comment

Google+ Followers

Powered by Blogger.