Breaking News
recent

ಈಡೇರುವುದೇ ಆರ್‌ಸಿಬಿ ಪ್ರಶಸ್ತಿ ಕನಸು?

ವಿರಾಟ್ ಕೊಹ್ಲಿ,,ಕ್ರಿಸ್ ಗೇಲ್‌..ಎ.ಬಿ. ಡಿವಿಲಿಯರ್ಸ್‌.. ಶೇನ್ ವ್ಯಾಟ್ಸನ್‌... ಇವರು ಕ್ರೀಸ್‌ನಲ್ಲಿ ಇದ್ದಷ್ಟು ಹೊತ್ತು ಬೌಂಡರಿ, ಸಿಕ್ಸರ್‌ಗಳು ಆನೆಪಟಾಕಿಯಂತೆ ಸಿಡಿಯುತ್ತವೆ. ಈ ನಾಲ್ವರು ಸ್ಪೋಟಕ ಬ್ಯಾಟ್ಸ್‌ಮನ್‌ಗಳು ಇರುವ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಒಂಬತ್ತನೇ ಋತುವಿನ ಚಾಂಪಿಯನ್ ಎಂದು ಈಗಾಗಲೇ ಕ್ರಿಕೆಟ್ ಅಭಿಮಾನಿಗಳು ‘ಭವಿಷ್ಯ’ ನುಡಿಯುತ್ತಿದ್ದಾರೆ.
Virat Kohli

ಏಕೆಂದರೆ ಇತ್ತೀಚೆಗಷ್ಟೇ ಮುಗಿದಿರುವ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅಬ್ಬರ, ಕ್ರಿಸ್‌ ಗೇಲ್ ದಾಖಲಿಸಿದ ಶತಕವನ್ನು ಯಾರೂ ಮರೆತಿಲ್ಲ. ಡಿವಿಲಿಯರ್ಸ್‌ ಹೆಚ್ಚು ಮಿಂಚದಿದ್ದರೂ  ಐಪಿಎಲ್‌ನಲ್ಲಿ ಅವರು ವಿಫಲರಾಗುವುದಿಲ್ಲ ಎಂಬುದನ್ನು ಅಂಕಿಸಂಖ್ಯೆಗಳು ಹೇಳುತ್ತವೆ. ಇವರ ಜೊತೆಗೆ ಆಸ್ಟ್ರೇಲಿಯಾದ ಅಮೋಘ ಆಲ್‌ರೌಂಡರ್ ಶೇನ್ ವಾಟ್ಸನ್‌ ಕೂಡ ಸೇರಿಕೊಂಡಿದ್ದಾರೆ. ಇದರಿಂದಾಗಿ ಈ ಬಾರಿ ಆರ್‌ಸಿಬಿಗೆ ಪ್ರಶಸ್ತಿ ಎನ್ನುವ ಆತ್ಮವಿಶ್ವಾಸ ಮೂಡಿದೆ.

2008ರಿಂದಲೂ ಆರ್‌ಸಿಬಿ ಬಗ್ಗೆ ಇಂತಹದ್ದೇ ಭರವಸೆ ವ್ಯಕ್ತವಾಗುತ್ತಲೇ ಇದೆ. ಪ್ರತಿ ವರ್ಷ ಟೂರ್ನಿಯ ಆರಂಭದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿಯೇ ಕಣಕ್ಕಿಳಿಯುವ ತಂಡ ಇದುವರೆಗೆ ಎರಡು ಬಾರಿ (2009, 2011) ರನ್ನರ್ಸ್‌ ಅಪ್ ಆಗಿದ್ದೇ ಸಾಧನೆ, ಹೋದ ವರ್ಷವೂ ರಾಂಚಿಯಲ್ಲಿ ಅದೃಷ್ಟ ಕೈಕೊಟ್ಟಿತ್ತು.

ಆ ರೋಚಕ ಸೆಮಿಫೈನಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಎದುರು ಸೋತಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂಡವು ಕಂಡಿದೆ.  ಸತತ ನಾಲ್ಕನೇ ವರ್ಷ ನಾಯಕರಾಗಿರುವ ವಿರಾಟ್ ಕೊಹ್ಲಿ ಹಿಂದಿನ ಎಲ್ಲ ನಿರಾಶೆಗಳನ್ನು ಮರೆತು ಟ್ರೋಫಿಗೆ ಮುತ್ತಿಕ್ಕುವ ಛಲದಲ್ಲಿದ್ದಾರೆ.

ಹೊಸ ಭರವಸೆಯತ್ತ..
ಯುನೈಟೆಡ್‌ ಬ್ರೆವರೀಸ್ ಸಂಸ್ಥೆಯ  ಫ್ರಾಂಚೈಸ್‌ ಮಾಲೀಕತ್ವವನ್ನು ಸಿದ್ಧಾರ್ಥ ಮಲ್ಯ (ವಿಜಯಮಲ್ಯ ಪುತ್ರ)  ವಹಿಸಿಕೊಂಡಿದ್ದಾರೆ. ತಂಡವನ್ನು ಮತ್ತಷ್ಟು ಬಲಪಡಿಸಲು ಈ ಬಾರಿ ಹೊಸ ಆಟಗಾರರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ.  ಅಮಾನತಿಗೆ ಒಳಗಾಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಆಡುತ್ತಿದ್ದ ವಿಂಡೀಸ್ ಬೌಲರ್ ಸ್ಯಾಮುಯೆಲ್ ಬದ್ರಿ, ರಾಜಸ್ತಾನ ರಾಯಲ್ಸ್‌ ತಂಡದಲ್ಲಿದ್ದ ಕರ್ನಾಟಕದ ಆದ ಸ್ಟುವರ್ಟ್ ಬಿನ್ನಿ, ಆಸ್ಟ್ರೇಲಿಯಾದ ಆಲ್‌ರೌಂಡರ್ ಶೇನ್ ವ್ಯಾಟ್ಸನ್‌,  ಸನ್‌ರೈಸರ್ಸ್‌ ಹೈದರಾಬಾದ್‌ನಲ್ಲಿದ್ದ ಕೆ.ಎಲ್. ರಾಹುಲ್, ಪರ್ವೇಜ್ ರಸೂಲ್ ಈಗ ಆರ್‌ಸಿಬಿ ತಂಡದಲ್ಲಿದ್ದಾರೆ.

ಬೇರೆ ತಂಡಗಳ ಬಲಾಬಲವನ್ನು ನೋಡಿದರೆ ಆರ್‌ಸಿಬಿಯ ಬ್ಯಾಟಿಂಗ್‌ ಕ್ರಮಾಂಕವು ಅತ್ಯಂತ ಬಲಶಾಲಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಂಟನೇ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ 491 ರನ್‌ ಗಳಿಸಿರುವ ಕ್ರಿಸ್ ಗೇಲ್ ಮತ್ತು  16 ಪಂದ್ಯಗಳಿಂದ 513 ರನ್‌ ಗಳಿಸಿರುವ ಎ.ಬಿ. ಡಿವಿಲಿಯರ್ಸ್‌ ಅಬ್ಬರದ ಆರಂಭ ನೀಡುವ ನಿಸ್ಸೀಮರು. ಅವರು ಹಾಕಿದ ಬುನಾದಿಯ ಮೇಲೆ  ರನ್‌ಗಳ ರಾಶಿ ಪೇರಿಸುವಲ್ಲಿ ವಿರಾಟ್ ಕೊಹ್ಲಿ ಹಿಂದೆ ಬೀಳುವುದಿಲ್ಲ.

ಅವರಿಗೆ ಜೊತೆ ನೀಡಲು ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್, ಮನ್‌ದೀಪ್ ಸಿಂಗ್ ಇದ್ದಾರೆ. ಇದೀಗ  ತಂಡಕ್ಕೆ ಸೇರಿರುವ ವ್ಯಾಟ್ಸನ್‌ ಮತ್ತು ಬಿನ್ನಿ ಸೇರ್ಪಡೆಯಿಂದ ತಂಡದಲ್ಲಿ ಆಲ್‌ರೌಂಡರ್‌ಗಳ ಸಂಖ್ಯೆ ಹೆಚ್ಚಿದೆ.  ರಾಜಸ್ತಾನ ತಂಡದಲ್ಲಿ ವ್ಯಾಟ್ಸನ್‌ ಒಟ್ಟು 347 ರನ್ ಕಲೆಹಾಕಿದ್ದರು. ಅದರಲ್ಲಿ ಒಂದು ಶತಕವೂ ಸೇರಿತ್ತು. ಬಿನ್ನಿಗೆ ಬ್ಯಾಟ್ ಬೀಸಲು ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ಇದೀಗ ಅವರಿಗೆ ತವರಿನ ತಂಡದಲ್ಲಿ ಆಡುವ ಪುಳಕ.

‘ಆರ್‌ಸಿಬಿ ತಂಡದಲ್ಲಿ ಆಡುವುದು ನನ್ನ ಬಹುದಿನಗಳ ಕನಸಾಗಿತ್ತು. ಇದೀಗ ಈಡೇರಿದೆ. ಉತ್ತಮ ಆಟದ ಮೂಲಕ ತಂಡಕ್ಕೆ ಗೆಲುವಿನ ಕಾಣಿಕೆ ನೀಡುವುದು ನನ್ನ ಗುರಿ. ತಂಡದಲ್ಲಿ ವಿಶ್ವ ಶ್ರೇಷ್ಠ ಆಟಗಾರರಿರುವುದು ನನ್ನ ಕಲಿಕೆಗೂ ನೆರ ವಾಗಲಿದೆ. ಆರ್‌ಸಿಬಿ ತಂಡದಲ್ಲಿರುವುದೇ ಒಂದು ದೊಡ್ಡ ಅವಕಾಶ. 11ರ ತಂಡದಲ್ಲಿ ಸ್ಥಾನ ಪಡೆದರೆ ಅದಕ್ಕಿಂತ ಶ್ರೇಷ್ಠವಾದದ್ದು ಮತ್ತೊಂದಿಲ್ಲ’ ಎಂದು ಸ್ಟುವರ್ಟ್‌ ಹೇಳುತ್ತಾರೆ.

ಬೌಲಿಂಗ್ ವಿಭಾಗದ ಸಮಸ್ಯೆ..
ಆದರೆ, ಈ ಬಾರಿ ತಂಡಕ್ಕೆ ಸಮಸ್ಯೆಯಿರುವುದು ಬೌಲಿಂಗ್‌ ವಿಭಾಗದಲ್ಲಿ. ತಂಡದ ಪ್ರಮುಖ ಬೌಲರ್‌ ಮೈಕಲ್ ಸ್ಟಾರ್ಕ್‌ ಕಾಲಿಗೆ ಗಾಯವಾಗಿದ್ದು,  ಕಣಕ್ಕೆ ಇಳಿಯುವ ಭರವಸೆ ಇಲ್ಲ. ಒಟ್ಟು 13 ಪಂದ್ಯಗಳಿಂದ 20 ವಿಕೆಟ್ ಕಬಳಿಸಿರುವ ಸ್ಟಾರ್ಕ್‌ ಡೆತ್ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕುವ ಸಮರ್ಥರು. ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಗಾಯಗೊಂಡಿರುವ ಸ್ಯಾಮು ಯೆಲ್ ಬದ್ರಿ ಕೂಡ ಚೇತರಿಸಿಕೊಂಡಿಲ್ಲ.

ಇದರಿಂದಾಗಿ ವರುಣ್ ಆ್ಯರನ್ ಮತ್ತು ಎಡಗೈ ಮಧ್ಯಮವೇಗಿ ಎಸ್. ಅರವಿಂದ್ ಅವರ ಮೇಲೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆಯಿದೆ. ಇವರಿಗೆ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಡೇವಿಡ್ ವೈಸ್, ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಾಹಲ್ ಜೊತೆ ನೀಡಲಿದ್ದಾರೆ. ಚಾಹಲ್ 15 ಪಂದ್ಯಗಳಿಂದ 23 ವಿಕೆಟ್‌ ಗಳಿಸಿ ಯಶಸ್ವಿ ಬೌಲರ್‌ ಎನಿಸಿದ್ದಾರೆ. ವಾಟ್ಸನ್‌, ಬಿನ್ನಿ ಬೌಲಿಂಗ್ ಮಾಡುವುದರಿಂದ ಒತ್ತಡ ನಿಭಾಯಿಸುವ ದಾರಿಯನ್ನು ಬೌಲಿಂಗ್ ಕೋಚ್ ಅಲನ್‌ ಡೋನಾಲ್ಡ್ ಕಂಡುಕೊಂಡಿದ್ದಾರೆ.

ವಿಕೆಟ್ ಕೀಪರ್ ಯಾರು?
ಪರಿಣತ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ತಂಡವನ್ನು ತೊರೆದಿರುವುದ ರಿಂದ ಅವರ ಜಾಗಕ್ಕೆ ಯಾರುವಂಬ ಪ್ರಶ್ನೆಯೂ ಈಗ ತಂಡದ ಮುಂದಿದೆ. ಎ.ಬಿ. ಡಿವಿಲಿಯರ್ಸ್‌ ವಿಕೆಟ್ ಹಿಂದೆ ರಕ್ಷಣೆಗೆ ನಿಲ್ಲುವ ಸಾಧ್ಯತೆಯೇ ಹೆಚ್ಚು. ಇಲ್ಲದಿದ್ದರೆ ಸಾಂದರ್ಭಿಕ ವಿಕೆಟ್‌ಕೀಪರ್‌ಗಳಾದ  ರಾಹುಲ್, ಟ್ರಾವಿಸ್ ಹೆಡ್, ಕೇದಾರ್ ಜಾಧವ್ ಅವರಲ್ಲಿ ಒಬ್ಬರಿಗೆ ಕೀಪಿಂಗ್ ಜವಾಬ್ದಾರಿ ಸಿಗಬಹುದು.

ವಿಶ್ವ ಟ್ವೆಂಟಿ–20 ಚಾಂಪಿಯನ್‌ಷಿಪ್‌ನಲ್ಲಿ ಐದು ಪಂದ್ಯಗಳಿಂದ 273 ರನ್ ಗಳಿಸಿ ಟೂರ್ನಿ ಶ್ರೇಷ್ಠ ಗೌರವ ಗಳಿಸಿದ್ದ ವಿರಾಟ್ ಕೊಹ್ಲಿಯ ರನ್‌ ಗಳಿಕೆಯ ಹಸಿವು ಇನ್ನೂ ತೀರಿದಂತಿಲ್ಲ. ಐಪಿಎಲ್‌ನಲ್ಲಿ ಅವರಿಗೆ ಮತ್ತಷ್ಟು ರನ್‌ ಗಳಿಸುವುದರ ಜೊತೆಗೆ ಪ್ರಶಸ್ತಿಯ ದಾಹವನ್ನೂ ನೀಗಿಸಿಕೊಳ್ಳುವ ಸವಾಲು  ಇದೆ.   ಅವರು ಈ ಒತ್ತಡಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲವೂ ಈಗ ಗರಿಗೆದರಿದೆ.  

2016ರಲ್ಲಿ ಸೇರ್ಪಡೆಯಾದ ಆಟಗಾರರು
ಕೇದಾರ್ ಜಾಧವ್ (ಭಾರತ), ಸಚಿನ್ ಬೇಬಿ (ಭಾರತ), ಕೆ.ಎಲ್ ರಾಹುಲ್ (ಭಾರತ), ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ), ಶೇನ್ ವ್ಯಾಟ್ಸನ್‌ (ಆಸ್ಟ್ರೇಲಿಯಾ), ಸ್ಟುವರ್ಟ್ ಬಿನ್ನಿ (ಭಾರತ), ಅಕ್ಷಯ್ ಕರಣ್‌ವೀರ್ (ಭಾರತ), ಪ್ರವೀಣ್ ದುಬೆ (ಕರ್ನಾಟಕ), ಪರ್ವೇಜ್ ರಸೂಲ್ (ಜಮ್ಮು–ಕಾಶ್ಮೀರ), ಕೇನ್ ರಿಚರ್ಡ್‌ಸನ್‌ (ಆಸ್ಟ್ರೇಲಿಯಾ), ಸ್ಯಾಮುಯೆಲ್ ಬದ್ರಿ (ವೆಸ್ಟ್ ಇಂಡೀಸ್), ಇಕ್ಬಾಲ್ ಅಬ್ದುಲ್ಲಾ (ಉತ್ತರಪ್ರದೇಶ), ವಿಕ್ರಮ್‌ಜೀತ್ ಮಲೀಕ್ (ಆಂಧ್ರಪ್ರದೇಶ), ವಿಕಾಸ್ ಟೋಕಸ್ (ದೆಹಲಿ)

ತಂಡ
ವಿರಾಟ್ ಕೊಹ್ಲಿ (ನಾಯಕ), ಎ.ಬಿ. ಡಿವಿಲಿಯರ್ಸ್, ಕ್ರಿಸ್ ಗೇಲ್, ಡೇವಿಡ್ ವೈಸ್, ಮನದೀಪ್ ಸಿಂಗ್, ಸರ್ಫರಾಜ್ ಖಾನ್, ಎಸ್. ಅರವಿಂದ್, ವರುಣ್ ಆ್ಯರನ್, ಶೇನ್ ವ್ಯಾಟ್ಸನ್, ಆ್ಯಡಂ ಮೈನ್, ಸ್ಟುವರ್ಟ್ ಬಿನ್ನಿ, ಟ್ರಾವಿಸ್ ಹೆಡ್, ಯುಜುವೇಂದ್ರ ಚಾಹಲ್, ಸಚಿನ್ ಬೇಬಿ, ಇಕ್ಬಾಲ್ ಅಬ್ದುಲ್ಲಾ, ಪ್ರವೀಣ್ ದುಬೆ, ಅಕ್ಷಯ್ ಕರಣವೀರ್, ಕೇನ್ ರಿಚರ್ಡ್‌ಸನ್‌ , ಅಬು ನೆಚಿಮ್, ಹರ್ಷಲ್ ಪಟೇಲ್, ಕೇದಾರ್ ಜಾಧವ್, ಸ್ಯಾಮುಯೆಲ್ ಬದ್ರಿ, ವಿಕ್ರಮಜೀತ್ ಮಲಿಕ್, ವಿಕಾಸ್ ಟೋಕಸ್, ಕೆ.ಎಲ್. ರಾಹುಲ್, ಪರ್ವೇಜ್ ರಸೂಲ್, ಕೋಚ್: ಡೇನಿಯಲ್ ವೆಟೋರಿ, ಸಹಾಯಕ ಕೋಚ್: ಬಿ. ಅರುಣ್, ಬ್ಯಾಟಿಂಗ್ ಕೋಚ್: ಟ್ರೆಂಟ್ ವುಡ್‌ಹಿಲ್, ಬೌಲಿಂಗ್ ಕೋಚ್: ಅಲನ್ ಡೋನಾಲ್ಡ್, ಫಿಸಿಯೊ: ಇವಾನ್ ಸ್ಪೀಕ್ಲೆ, ಕಂಡಿಷನಿಂಗ್ ಕೋಚ್: ಶಂಕರ್ ಬಸು

***
ಬ್ಯಾಟಿಂಗ್ ವಿಭಾಗದಲ್ಲಿ ನಮಗೆ ಚಿಂತೆಯಿಲ್ಲ. ಆದರೆ ಬೌಲಿಂಗ್ ವಿಭಾಗದಲ್ಲಿ ಸಮಸ್ಯೆಗಳಿವೆ. ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಮೈಕೆಲ್ ಸ್ಟಾರ್ಕ್ ಸೇವೆ ನಮಗೆ ಲಭ್ಯವಿಲ್ಲ. ಅವರ ಜಾಗವನ್ನು ತುಂಬಲು ಆ್ಯಡಮ್ ಮಿಲ್ನೆ ಅಥವಾ ಕೇನ್ ರಿಚರ್ಡ್ಸನ್ ಅವರಿಗೆ ಅವಕಾಶ ಸಿಗಬಹುದು. ಆದರೆ ಚಿನ್ನಸ್ವಾಮಿ ಅಂಗಳವನ್ನು ಚೆನ್ನಾಗಿ ತಿಳಿದುಕೊಂಡಿದ್ದ ಸ್ಟಾರ್ಕ್ ಅವರಷ್ಟೇ ಸಮರ್ಥವಾಗಿ ಬೌಲಿಂಗ್ ಮಾಡಬೇಕು. ಸ್ಯಾಮುಯೆಲ್ ಬದ್ರಿ ಕೂಡ ಭುಜದ ನೋವಿನಿಂದ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ಅವರು ಫಿಟ್ ಆದರೆ ತಂಡಕ್ಕೆ ಬಲ ಬರುತ್ತದೆ.
– ಡೇನಿಯಲ್ ವೆಟೋರಿ ಆರ್‌ಸಿಬಿ ಮುಖ್ಯ ಕೋಚ್
Fresh Kannada

Fresh Kannada

No comments:

Post a Comment

Google+ Followers

Powered by Blogger.