Breaking News
recent

‘ಇದು ನಿಜವಾದ ಅಸಹಿಷ್ಣುತೆ’ ಎಂದ ಸೋನು ನಿಗಮ್

ಗಾಯಕ ಸೋನು ನಿಗಮ್‌ರ ಸುಮಧುರ ದನಿಗೆ ಮನಸೋಲದವರಿಲ್ಲ. ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ಇವರಿಗೆ ವಿಮಾನದಲ್ಲಿ ಹಾಡಲು ಅವಕಾಶ ನೀಡಿದ್ದು, ವಿಮಾನ ಸಿಬ್ಬಂದಿಯ ಕೆಲಸಕ್ಕೇ ಕುತ್ತು ತಂದಿದೆ. ವಿಮಾನದ ಅನೌನ್ಸ್‌ಮೆಂಟ್ ಸಿಸ್ಟಮ್‌ನಲ್ಲಿ ಹಾಡಲು ಅವಕಾಶಕೊಟ್ಟಿದ್ದಕ್ಕೆ ಜೆಟ್ ಏರ್‌ವೇಸ್ ಐವರು ಸಿಬ್ಬಂದಿಯನ್ನು ವಜಾಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೋನು ನಿಗಮ್ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ವಿಮಾನದ ಭದ್ರತೆ ದೃಷ್ಟಿಯಿಂದ
ಅನೌನ್ಸ್‌ಮೆಂಟ್ ಸಿಸ್ಟಮ್‌ನಲ್ಲಿ ಹಾಡಲು ಅವಕಾಶ ನೀಡಿದ್ದು ತಪ್ಪೆಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಜೆಟ್ ಏರ್‌ವೇಸ್‌ಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

Sonu Nigam and Get Airlines

ನಡೆದಿದ್ದೇನು?: ಜ.4ರಂದು ಜೋಧ್‌ಪುರದಿಂದ ಮುಂಬೈಗೆ ಆಗಮಿಸುತ್ತಿದ್ದ ಜೆಟ್ ಏರ್‌ವೇಸ್‌ನ ವಿಮಾನದಲ್ಲಿ ಸೋನು ನಿಗಮ್ ಪ್ರಯಾಣಿಸುತ್ತಿದ್ದರು. ಈ ವೇಳೆ ಉಳಿದ ಪ್ರಯಾಣಿಕರು ಸೋನು ನಿಗಮ್‌ಗೆ ಹಾಡುವಂತೆ ಒತ್ತಾಯಿಸಿದ್ದರು. ಹೀಗಾಗಿ ಸೋನು ನಿಗಮ್ ವಿಮಾನದ ಅನೌನ್ಸ್‌ಮೆಂಟ್ ಸಿಸ್ಟಮ್ ಅನ್ನು ಬಳಸಿ ಹಾಡು ಹೇಳಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿತ್ತು.

ಸೋನು ಕಿಡಿ: ಜೆಟ್ ಏರ್‌ವೇಸ್ ಕ್ರಮಕ್ಕೆ ಗಾಯಕ ಸೋನು ನಿಗಮ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ವಿಮಾನದ ಸಿಬ್ಬಂದಿಯನ್ನು ವಜಾಗೊಳಿಸಿದ್ದು ನಿಜವಾದ ಅಸಹಿಷ್ಣುತೆ ಎಂದಿದ್ದಾರೆ. “ವಿದೇಶಗಳಲ್ಲಿ ವಿಮಾನದೊಳಗೆ ಫ್ಯಾಷನ್ ಶೋ, ಸಂಗೀತ ಕಾರ್ಯಕ್ರಮ ನಡೆಸುವುದನ್ನು ನೋಡಿದ್ದೇನೆ. ಕೆಲವೊಮ್ಮೆ ಸಿಬ್ಬಂದಿ ಪ್ರಯಾಣಿಕರ ಮನಸ್ಸಮಾಧಾನಕ್ಕಾಗಿ ಜೋಕ್‌ಗಳನ್ನು ಹೇಳಿರುವುದನ್ನೂ ಕೇಳಿದ್ದೇನೆ. ಅಲ್ಲದೆ ನಾನು ಹಾಡುವಾಗ ಯಾವುದೇ ಅನೌನ್ಸ್‌ಮೆಂಟ್‌ಗಳನ್ನು ಮಾಡಲು ಬಾಕಿಯಿರಲಿಲ್ಲ" ಎಂದಿದ್ದಾರೆ.

ಏರ್‌ವೇಸ್ ಕ್ರಮಕ್ಕೆ ಮಿಶ್ರಪ್ರತಿಕ್ರಿಯೆ: ವಿಮಾನದೊಳಗೆ ಸೋನುನಿಗಮ್ ಹಾಡು ಹಾಡಿರುವ ಬಗ್ಗೆ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮಹೇಶ್ ಶರ್ಮ ಪ್ರತಿಕ್ರಿಯಿಸಿದ್ದು, ಕೆಲ ಭದ್ರತಾ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಜತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೂ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಆದರೆ ವಿಮಾನಯಾನ ತಜ್ಞ ಹರ್ಷವರ್ಧನ್ ಸಚಿವರ ಹೇಳಿಕೆಯನ್ನು ತಳ್ಳಿಹಾಕಿದ್ದು, ಮೈಕ್‌ನ ಬಳಕೆ ಮಾಡಿದ್ದು ನಿಯಮದ ಉಲ್ಲಂಘನೆಯಲ್ಲ. ಇತ್ತೀಚಿನ ದಿನಗಳಲ್ಲಿ ಕೆಲಸಂಸ್ಥೆಗಳೇ ಇಂತಹ ಕಾರ್ಯಕ್ರಮ ಆಯೋಜಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿಯಮ ಉಲ್ಲಂಘನೆ: ಜೆಟ್ ಏರ್‌ವೇಸ್ ಕ್ರಮ ಭಾರಿ ಚರ್ಚೆಗೆ ಕಾರಣವಾಗಿರುವ ಬೆನ್ನೆಲ್ಲೇ ಡಿಜಿಸಿಎ ಯಾವ್ಯಾವ ನಿಯಮ ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಪಟ್ಟಿ ಬಿಡುಗಡೆ ಮಾಡಿದೆ. ಅನೌನ್ಸ್‌ಮೆಂಟ್ ಮೈಕ್ ಬಳಕೆ ನಿಯಮ ಉಲ್ಲಂಘನೆಯಾಗಿದೆ. ವಿಮಾನದ ಮಧ್ಯಭಾಗದಲ್ಲಿ ಪ್ರಯಾಣಿಕರ ಓಡಾಟಕ್ಕಿರುವ ಪ್ರದೇಶದಲ್ಲಿ ಹೆಚ್ಚಿನ ಪ್ರಯಾಣಿಕರು ನಿಂತಿರುವುದು ಕಂಡುಬಂದಿದೆ. ಅಲ್ಲದೆ ಕಾರ್ಯಕ್ರಮ ನಡೆಸುತ್ತಿದ್ದ ಸಮಯದಲ್ಲಿ ವಿಮಾನ ಇಳಿಮುಖವಾಗಿ ಹೋಗುತ್ತಿತ್ತು. ಹೀಗಾಗಿ ಹವಾಮಾನ ವ್ಯತ್ಯಯವಾಗಿದ್ದಲ್ಲಿ ಪ್ರಯಾಣಿಕರಿಗೆ ಇದರಿಂದ ತೊಂದರೆಯಾಗುತ್ತಿತ್ತು. ಜತೆಗೆ ವಿಮಾನ ಸಿಬ್ಬಂದಿ ಕ್ಯಾಬಿನ್‌ನಲ್ಲಾಗುತ್ತಿದ್ದ ಚಟುವಟಿಕೆಗಳ ಬಗ್ಗೆ ಗಮನ ಹರಿಸಿರಲಿಲ್ಲ. ಇವೆಲ್ಲವೂ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಡಿಜಿಸಿಎ ತಿಳಿಸಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.