Breaking News
recent

ನೀರೆಯರೇ ಸೀರೆ ಉಡುವ ಮುನ್ನ ಈ 6 ವಿಷಯ ನೆನಪಿಡಿ

ಹುಡುಗಿಯರಿಗೆ ಸೀರೆ ಉಡೋದಂದ್ರೆ ಎಲ್ಲಿಲ್ಲದ ಹಿಗ್ಗು. ಅದ್ರಲ್ಲೂ ಫಸ್ಟ್ ಟೈಂ ಸೀರೆ ಉಟ್ಟಾಗ ಪಕ್ಕದ ಮನೆ ಆಂಟಿಗೆ, ಮಹಡಿ ಮನೆ ಅಜ್ಜಿಗೆ (ಅಜ್ಜಿ ಮನೇಲಿರೋ ಹುಡುಗ ಕೂಡ ಇರಬಹುದು) ಅಷ್ಟೇ ಯಾಕೆ ಎದುರು ಮನೆಯ ಚಿಕ್ಕ ಹುಡುಗಿಗೂ ಸೀರೆ ಉಟ್ಟಿರೋದನ್ನ ತೋರಿಸಿ ಹೇಗ್ ಕಾಣ್ತಿದ್ದೀನಿ ಅಂತ ಕೇಳದೇ ಇರಲ್ಲ. ಚಿಕ್ಕವರಿದ್ದಾಗ ಮನೇಲಿ ಯಾರೂ ಇಲ್ಲದಾಗ ಕಪಾಟಿನಿಂದ ಅಮ್ಮನ ಸೀರೆ ತೆಗೆದು, ನೆರಿಗೆ ಹಾಕಿ ಹಾಗೋ ಹೀಗೋ ಸೀರೆ ಸುತ್ಕೊಂಡು ಹೋಗಿ ಕನ್ನಡಿ ಮುಂದೆ ನಿಂತು ನೋಡಿದ್ದು ಎಲ್ಲಾ ಹುಡುಗಿಯರಿಗೂ ನೆನಪಿರುತ್ತೆ. ಆದ್ರೆ ಶಾಲೆ ಸಮಾರಂಭಕ್ಕೋ ಅಥವಾ ಕಾಲೇಜಿನಲ್ಲಿ ಎತ್ನಿಕ್ ಡೇ ಇದ್ದಾಗ ಇಷ್ಟ ಬಂದಂತೆ ಸೀರೆ ಸುತ್ಕೊಂಡು ಹೋಗೋಕೆ ಆಗಲ್ಲ. ಆಗ ಅಮ್ಮನ ಸಹಾಯ ಬೇಕೇ ಬೇಕು. ಹಾಗೆ ಸೀರೆ ಉಡಿಸಿಕೊಂಡು ಕಾಲೇಜಿಗೆ ಹೋದ ಮೇಲೆ ನೀವು ಅದನ್ನ ಯಾವ ರೀತಿ ಮ್ಯಾನೇಜ್ ಮಾಡ್ತೀರಾ ಅನ್ನೋದು ಕೂಡ ಮುಖ್ಯ. ಫಸ್ಟ್ ಟೈಂ ಆಗ್ಲಿ, ಸೋ ಮೆನಿ ಟೈಂ ಆಗ್ಲಿ ಸೀರೆ ಉಡೋವಾಗ ಈ ಆರು ವಿಷಯವನ್ನ ಖಂಡಿತ ನೆನಪಿಡಿ.

1. ಯಾವ ಸೀರೆ ಉಡೋದು
ಅಬ್ಬಬ್ಬಾ.. ಇದನ್ನಂತೂ ನಾವು ಹೇಳೋದೇ ಬೇಡ. ಯಾಕಂದ್ರೆ ಸೀರೆ ಉಡಬೇಕು ಅಂತ ಅನ್ಕೊಂಡ 15 ದಿನ ಮುಂಚೇನೇ ಹುಡುಗಿಯರು ಒಂದ್ಸಲ ಬೀರು ಜಾಲಾಡಿ ಸೀರೆ ತೆಗೆದಿಟ್ಟಿರ್ತೀರ. ಆದರೆ ನೀವು ಉಡೋ ಸೀರೆಯನ್ನ ಸಲೀಸಾಗಿ ಮ್ಯಾನೇಜ್ ಮಾಡಬಹುದೋ ಇಲ್ಲವೋ ಅನ್ನೋದನ್ನ ಯೋಚಿಸಿ ಸೀರೆ ಸೆಲೆಕ್ಟ್ ಮಾಡಿ. ಆ ಸೀರೆಯನ್ನ ಮೊದಲೇ ಒಂದು ಸಲ ಉಟ್ಟು ಟ್ರಯಲ್ ನೋಡಿ. ಮೊದಲ ಬಾರಿ ಸೀರೆ ಉಡುತ್ತಿದ್ದರೆ ಕಡಿಮೆ ತೂಕವಿರುವ ಸೀರೆ ಅಥವಾ ಕಾಟನ್ ಸೀರೆ ಉಡೋದು ಸೂಕ್ತ. ರೇಶಿಮೆ ಸೇರೆ ಅಥವಾ ಹೆಚ್ಚು ತೂಕವಿರೋ ಸೀರೆ ಉಟ್ರೆ ಕಂಫರ್ಟೆಬಲ್ ಆಗಿ ಇರಲು ಸಾಧ್ಯವಾಗಲ್ಲ.
2. ಬ್ಲೌಸ್
ಸೀರೆಗೆ ತಕ್ಕಂತೆ ಬ್ಲೌಸ್ ಕೂಡ ಹೊಂದಿಕೆಯಾಗುವಂತಿಬೇಕು. ನಿಮ್ಮ ದೇಹಕ್ಕೆ ಫಿಟ್ ಆಗದಿರುವ ಬ್ಲೌಸ್ ಖಂಡಿತ ಧರಿಸಬೇಡಿ. ನಿಮ್ಮ ದೇಹದ ಅಳತೆಗೆ ತಕ್ಕಂತೆ ಬ್ಲೌಸ್ ಹೊಲಿಸಿಕೊಳ್ಳಿ ಅಥವಾ ಈಗ ಮಾರ್ಕೆಟ್‍ನಲ್ಲಿ ಲಭ್ಯವಿರುವ ರೆಡಿಮೇಡ್ ಬ್ಲೌಸ್ ಖರೀದಿಸಿ. ಸ್ಲೀವ್‍ಲೆಸ್, ಮೆಗಾ ಸ್ಲೀವ್, ಫುಲ್ ಆರ್ಮ್ ಬ್ಲೌಸ್ ಹೀಗೆ ನಿಮಗೆ ಇಷ್ಟವಾಗುವ ಯಾವುದೇ ಡಿಸೈನಿನ ಬ್ಲೌಸ್ ಆದರೂ ಅದು ನಿಮಗ ಫಿಟ್ ಆಗುವಂತಿರಲಿ.
3. ತೀರಾ ಕೆಳಗೆ ಅಥವಾ ತೀರಾ ಮೇಲಕ್ಕೆ ಸೀರೆಯನ್ನು ಉಡಬೇಡಿ
ಸೀರೆ ಉಡುವಾಗ ಗಮನದಲ್ಲಿಡಬೇಕಾದ ಮತ್ತೊಂದು ಅಂಶವೆಂದರೆ ತೀರಾ ಮೇಲಕ್ಕೆ ಅಥವಾ ತೀರಾ ಕೆಳಗೆ ಸೀರೆಯನ್ನು ಉಡದಿರುವುದು. ಪೆಟಿಕೋಟ್ ಭದ್ರವಾಗಿ ಕಟ್ಟಿ ಸೀರೆ ಉಡೋಕೆ ಶುರು ಮಾಡಿ. ಸೊಂಟದಿಂದ ತೀರಾ ಮೇಲಕ್ಕೆ ಸೀರೆ ಉಟ್ಟರೆ ನೆರಿಗೆಗಳಿಂದ ಹೊಟ್ಟೆ ದಪ್ಪ ಕಾಣುತ್ತದೆ. ಅಥವಾ ಅಗತ್ಯಕ್ಕಿಂತ ಕೆಳಗೆ ಉಟ್ಟರಂತೂ ನಾವು ಹೇಳೋದೇ ಬೇಡ. ಆದ್ದರಿಂದ ನೀವು ಸಿಲ್ಕ್ ಸ್ಮಿತಾ ಥರಾ ಕಾಣ್ತೀರೋ ಇಲ್ಲ ಶಿಲ್ಪಾ ಶೆಟ್ಟಿ ಥರ ಕಾಣ್ತೀರೋ ನೀವೆ ಡಿಸೈಡ್ ಮಾಡಿ.
4. ಸೇಫ್ಟಿ ಪಿನ್‍ಗಳನ್ನ ಸೇಫ್ಟಿಗಾಗಿ ಮಾತ್ರ ಉಪಯೋಗಿಸಿ
ಸೀರೆ ಇದ್ದ ಜಾಗದಲ್ಲೇ ಇರಬೇಕೆಂದರೆ ಸೇಫ್ಟಿ ಪಿನ್‍ಗಳನ್ನ ಖಂಡಿತ ಉಪಯೋಗಿಸಿ. ಆದ್ರೆ ಪಿನ್‍ಗಳ ಗೊಂಚಲು ಇದೆ ಅಂತ ಸಿಕ್ಕಸಿಕ್ಕ ಕಡೆಯಲ್ಲೆಲ್ಲಾ ಪಿನ್ ಹಾಕಬೇಡಿ. ನೆರಿಗೆ ಕೂರಿಸಲು, ಸೆರಗಿಗೆ ಮತ್ತು ಅಗತ್ಯವಿದ್ದರೆ ಬ್ಲೌಸ್‍ಗೆ ಮಾತ್ರ ಪಿನ್ ಉಪಯೋಗಿಸಿ. ಸೇಫಾಗಿರಲಿ ಅಂತ ಎಲ್ಲೆಂದರಲ್ಲಿ ಪಿನ್ ಹಾಕಿದ್ರೆ ಸೀರೆ ಹಾಳಾಗೋದಲ್ಲದೆ ಅದನ್ನ ತೆಗೀಬೇಕಾದ್ರೆ ತುಂಬಾ ಫಜೀತಿ ಪಡಬೇಕಾಗುತ್ತೆ.
5. ಸೆರಗು
ಸೀರೆಯನ್ನ 5-6 ಮಡಿಕೆ ಮಡಚಿ ನೀಟಾಗಿ ಸೆರಗಿನ ನೆರಿಗೆ ಹಾಕಬಹುದು. ಅಥವಾ ಒಂದೆಳೆಯಲ್ಲಿ ಪಿನ್ ಮಾಡಬಹುದು. ಎರಡರಲ್ಲಿ ಯಾವುದೇ ಮಾಡಿದರೂ ನಿಮ್ಮ ಸೆರಗು ನೆಲಕ್ಕೆ ತಾಗುವಷ್ಟು ಉದ್ದ ಇರಬಾರದು. ಸೆರಗು ಸಾಧ್ಯವಾದಷ್ಟು ಮಂಡಿಯುದ್ದದಷ್ಟಿದ್ದರೆ ಸಾಕು. ಒಂದು ವೇಳೆ ತೀರಾ ಉದ್ದವಾದರೆ ಕಾಲೇಜಿನ ನೆಲ ಗುಡಿಸಿದ ಭಾಗ್ಯ ನಿಮ್ಮದೇ ಆದರೆ ಮನೆಗೆ ಹೋದ್ಮೇಲೆ ಅಮ್ಮನಿಂದ ಮಂಗಳಾರತಿ ಕೂಡ ತಪ್ಪಿದ್ದಲ್ಲ.
5. ಚಪ್ಪಲಿ
ಸೀರೆ ಉಟ್ಟಾಗ ಫ್ಲಾಟ್ ಚಪ್ಪಲಿಗಳನ್ನು ಧರಿಸಬೇಡಿ. ಹಾಗಂತ ಹೈ ಹೀಲ್ಸ್ ಹಾಕಿ ನಡೆದರೆ ನೆರಿಗೆ ಕಾಲಿಗೆ ತಾಗಿ ಬಿದ್ದೀರಿ ಹುಷಾರು. ಹೀಗೆಲ್ಲಾ ಆಗಬಾರದು ಅಂತಿದ್ರೆ ಮಧ್ಯಮ ಎತ್ತರದ ಸೋಲ್ ಇರುವ ಚಪ್ಪಲಿ ಧರಿಸಿ. ಸೀರೆ ಉಟ್ಟಾಗ ನೀರೆಯಂತೆ ಗಂಭೀರವಾಗಿ ನಡೆಯಿರಿ. ಜೋರಾಗಿ ನಡೆಯುವುದು ಓಡೊದು ಮಾಡಿಬೇಡಿ. ನೆರಿಗೆಗಳು ಚಪ್ಪಲಿಗೆ ಸಿಕ್ಕಿಹಾಕೊಳ್ಳದಂತೆ ಗಮನ ವಹಿಸಿ.
ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸೀರೆ ಉಟ್ರೆ ಅಮ್ಮನಿಂದ ದೃಷ್ಟಿ ಬೊಟ್ಟು, ಪಕ್ಕದ ಮನೆ ಆಂಟಿಯಿಂದ ಕಾಂಪ್ಲಿಮೆಂಟ್ಸು ಗ್ಯಾರಂಟಿ.
Fresh Kannada

Fresh Kannada

No comments:

Post a Comment

Google+ Followers

Powered by Blogger.