Breaking News
recent

ಇಟ್ಟ ಗುರಿ ಮಿಸ್ಸಿಲ್ಲ ಕೊಟ್ಟ ಕಾಸಿಗೆ ಲಾಸಿಲ್ಲ!

ಅವನೊಬ್ಬ ಸುರದ್ರೂಪಿ ಯುವಕ. ‘ದೂಧ್‌ಪೇಡ’ದಂತಿರುವ ಅವನ ಒಂದೇ ಒಂದು ಮೈನಸ್ ಪಾಯಿಂಟ್, ಇರುಳು ಕುರುಡು. ಇಂಥವನೊಬ್ಬ ಸರಿರಾತ್ರಿ 500 ಮೀ. ದೂರದಿಂದ ಅಂತಾರಾಷ್ಟ್ರೀಯ ಕುಖ್ಯಾತಿ ಪಡೆದ ಡಾನ್‌ವೊಬ್ಬನ ಹಣೆಗೆ ಗುರಿ ಇಟ್ಟು ಶೂಟ್ ಮಾಡಿಬಿಟ್ಟರೇ? ಅವನನ್ನು ‘ಶಾರ್ಪ್ ಶೂಟರ್’ ಎನ್ನಲೇಬೇಕು! ‘ಅಯ್ಯೋ ಸಾಧ್ಯನೇ ಇಲ್ಲ’ ಎಂಬ ವಾದ ನಿಮ್ಮದಾದರೆ, ಒಮ್ಮೆ ‘ಶಾರ್ಪ್ ಶೂಟರ್’ ನೋಡಿ. ಬಹಳ ದಿನಗಳ ನಂತರ, ಪೂರ್ಣ ಪ್ರಮಾಣದ ಹಾಸ್ಯ ಚಿತ್ರವೊಂದರಲ್ಲಿ ದಿಗಂತ್ ಮಿಂಚಿದ್ದಾರೆ. 
ಇಟ್ಟ ಗುರಿ ಮಿಸ್ಸಿಲ್ಲ ಕೊಟ್ಟ ಕಾಸಿಗೆ ಲಾಸಿಲ್ಲ!

ಕಾಮಿಡಿ ಗನ್ ಹಿಡಿದು ನಗೆ ಬುಲೆಟ್ ಸಿಡಿಸಿದ್ದಾರೆ, ಸಿಕ್ಸ್ ಪ್ಯಾಕ್ ದೇಹಸಿರಿಯ ಪ್ರದರ್ಶನದೊಟ್ಟಿಗೆ, ಆಕ್ಷನ್ ಕೂಡ ಮಾಡಿದ್ದಾರೆ. ನಾಯಕಿ ಸಂಗೀತಾ ವಕೀಲೆಯಾಗಿ ಗಮನ ಸೆಳೆಯುವುದಕ್ಕಿಂತ ಗ್ಲಾಮರ್‌ನಿಂದ ಕಣ್ಣು ಕುಕ್ಕುತ್ತಾರೆ. ಅಡಿಗಡಿಗೂ ಪಂಚಿಂಗ್ ಡೈಲಾಗ್ ಹೊಡೆಯುತ್ತ ಶಿಳ್ಳೆ ಗಿಟ್ಟಿಸುವಲ್ಲಿ ಚಿಕ್ಕಣ್ಣ ಹಿಂದೆ ಬಿದ್ದಿಲ್ಲ. ಮೂಗನಾಗಿ ಕೊಂಚ ಅತಿರೇಕ ಎನಿಸುವ ಮಿತ್ರ ಮತ್ತು ಸತ್ಯಜಿತ್ ಪಾತ್ರಗಳು ಇನ್ನಷ್ಟು ‘ಶಾರ್ಪ್’ ಆಗಿರಬೇಕಿತ್ತು. ಪೋಷಕ ಕಲಾವಿದರು ‘ಶಾರ್ಪ್’ನೆಸ್ ಹೆಚ್ಚಿಸುವಲ್ಲಿ ಶ್ರಮಿಸಿದ್ದಾರೆ. ‘ಕುಂಟೆಬಿಲ್ಲೆ’ ಆಡುವ ಐಂದ್ರಿತಾ ರೇ ಮೋಡಿಗೆ ಮರುಳಾಗದೆ ವಿಧಿ ಇಲ್ಲ! ತಾಂತ್ರಿಕವಾಗಿಯೂ ಚಿತ್ರ ಶ್ರೀಮಂತವಾಗಿದೆ. ಆದರೂ ನಿರ್ದೇಶಕ ಗೌಸ್ ಪೀರ್ ಇನ್ನೊಂದಿಷ್ಟು ಹೋಮ್‌ವರ್ಕ್ ಮಾಡಿದಿದ್ದರೆ, ಮತ್ತಷ್ಟು ಕಿಕ್ ನೀಡುವಲ್ಲಿ ‘ಶೂಟರ್’ ಸ-ಲನಾಗುತ್ತಿದ್ದ. ಸಂಗೀತಕ್ಕೆ ಮುದ ನೀಡುವ ಗುಣವಿದ್ದರೂ ಗುನುಗಿಸಿಕೊಳ್ಳುವ ಶಕ್ತಿಯಿಲ್ಲ. ಅಲ್ಲಲ್ಲಿ ದ್ವಂದ್ವಾರ್ಥ ಸಂಭಾಷಣೆ ಕಚಗುಳಿ ಇಟ್ಟರೂ ಸಹ್ಯ. ಒಟ್ಟಾರೆ, ‘ರಾತ್ರಿ ಕುರುಡ’ನ ಆಟಕ್ಕೆ ‘ವಿಜಯವಾಣಿ’ ಓದುಗ ವೀಕ್ಷಕರು 10ಕ್ಕೆ 7 ಅಂಕ ನೀಡಿದ್ದಾರೆ. ಸ್ಟಾರ್ ಲೆಕ್ಕದಲ್ಲಿ 3ಕ್ಕೆ **

1. ದಿಗಂತ್ ಫೈಟ್ ಚೆನ್ನಾಗಿದೆ 7/10
ಕಥೆಯಲ್ಲಿ ಹೇಳಿಕೊಳ್ಳುವಂಥ ವಿಶೇಷತೆ ಏನೂ ಇಲ್ಲ. ಆದರೆ ನಿರೂಪಣೆಯಲ್ಲಿ ತಾಜಾತನವಿದೆ. ಬರೀ ಕಾಮಿಡಿ ಮಾಡಿಕೊಂಡಿದ್ದ ದಿಗಂತ್ ಇಲ್ಲಿ ಸಖತ್ ಆಗಿ ಫೈಟ್ ಕೂಡ ಮಾಡಿ ದ್ದಾರೆ. ಚಿತ್ರದಲ್ಲಿ ಕೆಲವೊಂದು ಡೈಲಾಗ್‌ಗಳು ಕಚಗುಳಿ ಇಡುತ್ತವೆ.
ಶ್ರೇಯಸ್ ದೇವನೂರು ಮೈಸೂರು

2. ನಿರ್ದೇಶಕರ ಪ್ರಯತ್ನ ಯಶಸ್ವಿ 8/10
ನಾಯಕನಿಗೆ ರಾತ್ರಿ ಕಣ್ಣು ಕಾಣುವುದಿಲ್ಲ. ನಾಯಕಿಗೆ ರಾತ್ರಿ ಎಂದರೆ ಭಯ. ಇದೇ ಇವರ ಮೈನಸ್ ಪಾಯಿಂಟ್! ಇದರಿಂದ ಏನೆಲ್ಲ ಸಮಸ್ಯೆ ಉಂಟಾಗುತ್ತೆ ಅನ್ನೋದನ್ನು ನಿರ್ದೇಶಕರು ಮನರಂಜ
ನಾತ್ಮಕವಾಗಿ ಹೇಳಿದ್ದಾರೆ. ನಾಯಕಿ ಸಂಗೀತಾ ಅಭಿನಯ ಓಕೆ.
ಷಡಕ್ಷರಪ್ಪ ಶಿವಮೊಗ್ಗ

3. ಪಕ್ಕಾ ಮನರಂಜನೆ7/10
ಮೊದಲ ಬಾರಿ ನಿರ್ದೇಶನ ಮಾಡಿರುವ ಗೌಸ್‌ಪೀರ್, ಪಕ್ಕಾ ಮನರಂಜನೆಯುಳ್ಳ ಚಿತ್ರ ಕೊಟ್ಟಿದ್ದಾರೆ. ‘ದಿಗಂತ್ ಆಕ್ಷನ್ ಮಾಡ್ತಾರಾ’ ಎಂಬ ಅನುಮಾನವಿತ್ತು. ಅದು ದೂರವಾಗಿದೆ. ಸಾಹಸ ಸನ್ನಿವೇಶಗಳಲ್ಲಿ ದಿಗಂತ್ ಇಷ್ಟವಾದರೆ, ಸಂಗೀತಾ ಹಾಡುಗಳಲ್ಲಿ ಕಣ್ಮನ ಸೆಳೆಯುತ್ತಾರೆ.
ಸಚಿನ್ ಕುಲಕರ್ಣಿ ಧಾರವಾಡ

4. ಡಿಫರೆಂಟ್ ದಿಗಂತ್ 7/10
ಹಳ್ಳಿಯಿಂದ ಪಟ್ಟಣಕ್ಕೆ ಬರುವ ಹುಡುಗನ ಬದುಕಿನಲ್ಲಿ ನಡೆಯುವ ಘಟನೆಗಳನ್ನು ಚೆನ್ನಾಗಿ ತೋರಿಸಿದ್ದಾರೆ. ದಿಗಂತ್ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದು ಭೂಗತ ಜಗತ್ತಿನ ಕಥೆ ಎನಿಸಿದರೂ ನಂತರ ಹಾಸ್ಯ, ಪ್ರೀತಿಯತ್ತ ಹೊರಳಿಕೊಂಡು ನೋಡುಗನಿಗೆ ಮುದ ನೀಡುತ್ತದೆ.
ದೀಪ್ತಿ

5. ದೇಸಿ ಜೇಮ್ಸ್‌ಬಾಂಡ್! 8/10
ದಿಗಂತ್ ಇಲ್ಲಿ ದೇಸಿ ಜೇಮ್ಸ್ ಬಾಂಡ್ ಆಗಿ ಮಿಂಚಿದ್ದಾರೆ. ಚಾಕೊಲೇಟ್ ಬಾಯ್ ಇಮೇಜ್‌ನಿಂದ ಆಕ್ಷನ್ ಅವತಾರ ತಾಳಿದ್ದಾರೆ ಅವರಿಲ್ಲಿ. ಒಟ್ಟಾರೆ ಚಿತ್ರ ಬೋರಾಗಲ್ಲ. ಐಂದ್ರಿತಾ ಐಟಂ ಸಾಂಗ್ ಸೂಪರ್!
ಅಲ್ತಾಫ್ ಮಳಖೇಡ ಕಲಬುರಗಿ

6. ಕುಟುಂಬ ಸಮೇತ ನೋಡಿ 8/10
ಕುರುಡನಲ್ಲಿರುವ ತೀಕ್ಷ್ಣ ಬುದ್ಧಿಶಕ್ತಿಯನ್ನು ಚೆನ್ನಾಗಿ ತೋರಿಸಲಾಗಿದೆ. ಹಾಸ್ಯಪ್ರe ಚೆನ್ನಾಗಿದೆ. ನಿರ್ದೇಶನದಲ್ಲಿ ಗೌಸ್ ಪೀರ್ ಇನ್ನೂ ಮಾಗಬೇಕು. ಕಥೆ, ಸಂಭಾಷಣೆ ಉತ್ತಮವಾಗಿ ನಿರೂಪಿತಗೊಂಡಿದೆ. ಕುಟುಂಬದೊಂದಿಗೆ ಮುಜುಗರವಿಲ್ಲದೆ ನೋಡಬಹುದಾದ ಸಿನಿಮಾ.
ಚಾಂದಪಾಷಾ ಸಿಂಧನೂರು

7. ಕಥೆ ಬೋರು, ಮಿಕ್ಕೆಲ್ಲ ಜೋರು! 5/10
ಐಟಂ ಹಾಡಿನಲ್ಲಿ ದಿಗಂತ್ ಹಾಗೂ ಐಂದ್ರಿತಾ ರೇ ಜೋಡಿ ಮುದ್ದಾಗಿದೆ. ಅದು ಬಿಟ್ಟರೆ, ಇಡೀ ಕತೆ ಬೋರು ಹೊಡೆಸುತ್ತದೆ. ಕಾಮಿಡಿಯ ಕಚಗುಳಿಯೂ ಸಹನೆಯ ಕಟ್ಟೆಯೊಡೆಯುವಂತೆ ಮಾಡುತ್ತದೆ. ನಿರ್ದೇಶಕರು ಇನ್ನಷ್ಟು ಪಳಗಬೇಕು.
ಪ್ರಕಾಶ್ ಚಿತ್ರದುರ್ಗ

8. ಕಾಮಿಡಿ ಕಿಕ್ ಜಾಸ್ತಿ 7/10
ದಿಗಂತ್- ಚಿಕ್ಕಣ್ಣ ಹಾಸ್ಯ ಚಟಾಕಿ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ಹೊಸಲುಕ್‌ನಲ್ಲಿ ದಿಗಂತ್ ಆಕರ್ಷಕವಾಗಿ ಕಾಣಿಸುತ್ತಾರೆ. ಬರೀ ಗ್ಲಾಮರ್‌ನಿಂದಲೇ ನಾಯಕಿ ಸಂಗೀತಾ ಗಮನ ಸೆಳೆಯುತ್ತಾರೆ. ಒಟ್ಟಿನಲ್ಲಿ ಕಾಮಿಡಿ ಕಿಕ್ ಕೊಂಚ ಜಾಸ್ತಿಯೇ ಇದೆ.
ನಾಗರಾಜ ಮಿರ್ಜಿ ಜಮಖಂಡಿ
Fresh Kannada

Fresh Kannada

No comments:

Post a Comment

Google+ Followers

Powered by Blogger.