Breaking News
recent

ಶ್ರೀನಾಥ್ ರನ್ನ 'ಸ್ಟಾರ್' ಮಾಡಿದ್ದೇ ಕೆ.ಎಸ್.ಎಲ್.ಸ್ವಾಮಿ.!

ಕನ್ನಡ ನಟ ಶ್ರೀನಾಥ್ 'ಪ್ರಣಯರಾಜ' ಅಂತ ನಿಮಗೆಲ್ಲರಿಗೂ ಗೊತ್ತು. 

ಶ್ರೀನಾಥ್ ರನ್ನ 'ಸ್ಟಾರ್' ಮಾಡಿದ್ದೇ ಕೆ.ಎಸ್.ಎಲ್.ಸ್ವಾಮಿ.!

ಆದ್ರೆ, ಶ್ರೀನಾಥ್ (ನಾರಾಯಣ ಸ್ವಾಮಿ) 'ಪ್ರಣಯರಾಜ' ಆಗುವುದರ ಹಿಂದೆ ಕೆ.ಎಸ್.ಎಲ್.ಸ್ವಾಮಿ ಅವರ ಶ್ರಮ ಎಷ್ಟಿತ್ತು ಅನ್ನೋದು ನಿಮಗೆ ಗೊತ್ತಿಲ್ಲ.
ಇಂದು ಬಾರದ ಲೋಕಕ್ಕೆ ಪಯಣಿಸಿರುವ ಕೆ.ಎಸ್.ಎಲ್.ಸ್ವಾಮಿ 'ಪ್ರಣಯರಾಜ' ಶ್ರೀನಾಥ್ ಗೆ ಆತ್ಮೀಯರು. ಶ್ರೀನಾಥ್ ಇಂದು ಪ್ರಸಿದ್ಧಿಗಳಿಸಿರುವುದಕ್ಕೆ ಕೆ.ಎಸ್.ಎಲ್.ಸ್ವಾಮಿ ಹೇಗೆ ಕಾರಣಕರ್ತರಾದರು ಅನ್ನುವ ಕಥೆಯನ್ನ ನಿಮಗೆ ಹೇಳ್ತೀವಿ ಕೇಳಿ....
ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಆಗ್ಬೇಕು ಅಂತ ಕನಸು ಹೊತ್ತು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀನಾಥ್ (ನಾರಾಯಣ ಸ್ವಾಮಿ) ಮೊದಮೊದಲು ಸಣ್ಣ ಪುಟ್ಟ ಪಾತ್ರಗಳಿಗೆ ಮಾತ್ರ ಸೀಮಿತವಾಗಿದ್ದರು.
ಆದು 1974...''ದೊಡ್ಡ ಹೀರೋ ಆಗಲಿಲ್ಲ. ಸ್ಟಾರ್ ಆಗಲಿಲ್ಲ. ಕನ್ನಡ ಚಿತ್ರರಂಗದ ಸಹವಾಸ ಸಾಕು'' ಅಂತ ನಟ ಶ್ರೀನಾಥ್ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ಮನಸ್ಸು ಮಾಡಿದಾಗ ಶ್ರೀನಾಥ್ ಕೈಹಿಡಿದು ಅವರ ವೃತ್ತಿಬದುಕಿಗೆ ದೊಡ್ಡ ಬ್ರೇಕ್ ನೀಡಿದವರು ನಿರ್ದೇಶಕ, ನಿರ್ಮಾಪಕ ಕೆ.ಎಸ್.ಎಲ್.ಸ್ವಾಮಿ. [ಹಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ವಿಧಿವಶ]
ಅದಾಗಲೇ, 30-35 ಸಿನಿಮಾಗಳಲ್ಲಿ ನಟಿಸಿದ್ದರೂ, ಶ್ರೀನಾಥ್ ಗೆ 'ಸ್ಟಾರ್' ಸ್ಟೇಟಸ್ ಸಿಕ್ಕಿರಲಿಲ್ಲ. ಸ್ಟಾರ್ ಆಗಲಿಲ್ಲ ಅಂದ್ರೆ ಚಿತ್ರರಂಗದಲ್ಲಿ ಉಳಿಯುವುದು ತುಂಬಾ ಕಷ್ಟ. ನಟರು ಸ್ಟಾರ್ ಆಗ್ತಿದ್ದದ್ದು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಚಿತ್ರಗಳಿಂದ. ವಿಷ್ಣುವರ್ಧನ್, ಚಂದ್ರಶೇಖರ್, ಅಂಬರೀಶ್ ಸ್ಟಾರ್ ಆಗಿದ್ದು ಪುಟ್ಟಣ್ಣ ಚಿತ್ರಗಳಿಂದಲೇ.
ಸ್ಟುಡಿಯೋದ ಒಂದೇ ಫ್ಲೋರ್ ನಲ್ಲಿ ಶ್ರೀನಾಥ್ ಮತ್ತು ಪುಟ್ಟಣ್ಣ ಕೆಲಸ ಮಾಡುತ್ತಿದ್ದರೂ, ಶ್ರೀನಾಥ್ ರನ್ನ ಪುಟ್ಟಣ್ಣ ಮಾತನಾಡಿಸುತ್ತಿರಲಿಲ್ಲ. ಅವರ ಸಿನಿಮಾಗೆ ಚಾನ್ಸ್ ಕೊಟ್ಟಿರಲಿಲ್ಲ. ಕೊಡುವ ಆಲೋಚನೆಯೂ ಇರಲಿಲ್ಲ. ಹೀಗಾಗಿ ಚಿತ್ರರಂಗ ಬಿಟ್ಟುಬಿಡಬೇಕು ಅಂತ ಶ್ರೀನಾಥ್ ನಿರ್ಧಾರ ಮಾಡಿಬಿಟ್ಟಿದ್ದರು. ಆಗ ಅವರ ನಿರ್ಧಾರವನ್ನು ಬದಲಾಯಿಸಿದ್ದು ಕೆ.ಎಸ್.ಎಲ್.ಸ್ವಾಮಿ.
ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಕೆ.ಎಸ್.ಎಲ್.ಸ್ವಾಮಿ 'ಶುಭಮಂಗಳ' ಸಿನಿಮಾ ನಿರ್ಮಾಣ ಮಾಡ್ತಿದ್ರು. ಶೂಟಿಂಗ್ ಶುರುಮಾಡ್ಬೇಕು ಅಂದಾಗ ಮುಖ್ಯ ಪಾತ್ರಕ್ಕೆ ಪುಟ್ಟಣ್ಣ ಕಣಗಾಲ್ ಆರತಿಯನ್ನ ಸೆಲೆಕ್ಟ್ ಮಾಡಿದ್ದರು. ಹೀರೋ ಪಾತ್ರಕ್ಕೆ ವಿಷ್ಣುವರ್ಧನ್ ರನ್ನ ಫಿಕ್ಸ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿತ್ತು.
ಆಗ, ''ವಿಷ್ಣುವರ್ಧನ್ ಇದ್ದರೆ, ಭಾರತಿಯನ್ನ ಹೀರೋಯಿನ್ ಆಗಿ ಹಾಕೋಳ್ಳೋಣ. ಯಾಕಂದ್ರೆ, ಭಾರತಿ ಟಾಪ್ ನಲ್ಲಿದ್ದಾರೆ. ಕಲೆಕ್ಷನ್ ವೈಸ್ ವರ್ಕೌಟ್ ಆಗುತ್ತೆ'' ಅಂತ ಕೆ.ಎಸ್.ಎಲ್.ಸ್ವಾಮಿ, ಪುಟ್ಟಣ್ಣ ಕಣಗಾಲ್ ಗೆ ಹೇಳಿದರು.
ಅದಕ್ಕೆ ಪುಟ್ಟಣ್ಣ, ''ಆರತಿನೇ ಇರ್ಲಿ'' ಅಂದಾಗ ಕೆ.ಎಸ್.ಎಲ್.ಸ್ವಾಮಿ, ''ಆರತಿ ಇದ್ರೆ, ಶ್ರೀನಾಥ್ ರನ್ನ ಹಾಕೋಳ್ಳೋಣ. ನಾನು ಅವರಿಗೆ ಪ್ರಾಮಿಸ್ ಮಾಡಿದ್ದೀನಿ'' ಅಂತ ಕೆ.ಎಸ್.ಎಲ್.ಸ್ವಾಮಿ ಹಠ ಹಿಡಿದು ಕೂರುತ್ತಾರೆ. [ಸಾವಿನಲ್ಲೂ ಸಾರ್ಥಕತೆ ಮೆರೆದ ಕೆ.ಎಸ್ ಎಲ್ ಸ್ವಾಮಿ]
''ಶ್ರೀನಾಥ್ ಬೇಡ. ಅವ್ರು ದಪ್ಪಗಿದ್ದಾರೆ. ಸ್ಮೈಲ್ ಚೆನ್ನಾಗಿಲ್ಲ'' ಅಂತ ಪುಟ್ಟಣ್ಣ ಎಷ್ಟು ಹೇಳಿದ್ರೂ ಕೆ.ಎಸ್.ಎಲ್.ಸ್ವಾಮಿ ಕೇಳುವುದಿಲ್ಲ. ತಮ್ಮ ಪಟ್ಟನ್ನ ಬಿಡದೇ 'ಶುಭಮಂಗಳ' ಚಿತ್ರಕ್ಕೆ ಶ್ರೀನಾಥ್ ರನ್ನ ಹೀರೋ ಆಗಿ ಆಯ್ಕೆ ಮಾಡ್ತಾರೆ.
ನಟ ಶ್ರೀನಾಥ್ ಗೆ ಕೆ.ಎಸ್.ಎಲ್.ಸ್ವಾಮಿ ಕೊಟ್ಟ ಮಾತನ್ನ ಉಳಿಸಿಕೊಂಡು ಪುಟ್ಟಣ್ಣ ಕಣಗಾಲ್ ಸಿನಿಮಾದಲ್ಲಿ ಚಾನ್ಸ್ ಕೊಡಿಸುತ್ತಾರೆ. 'ಶುಭಮಂಗಳ' ಯಶಸ್ವಿ ಆಗುತ್ತೆ. ಶ್ರೀನಾಥ್ ವೃತ್ತಿಬದುಕ್ಕಲ್ಲಿ ಮುಂದೆ ನಡೆದಿದ್ದೆಲ್ಲಾ ಇತಿಹಾಸ. [ದರ್ಶನ್ ತಂದೆಗೆ 'ತೂಗುದೀಪ' ಹೆಸರು ಕೊಟ್ಟವ್ರು ಇದೇ ರಾಧಾರವಿ.!]
ಚಿತ್ರರಂಗವನ್ನೇ ಬಿಡುವಷ್ಟು ಬೇಸರ ಮಾಡಿಕೊಂಡಿದ್ದ ಶ್ರೀನಾಥ್ ಗೆ ಹೊಸ ಬೆಳಕು ನೀಡಿದ ಕೆ.ಎಸ್.ಎಲ್.ಸ್ವಾಮಿ ಇಂದು ಮೋಡದ ಮರೆಗೆ ಸರಿದಿದ್ದಾರೆ. ಕೆ.ಎಸ್.ಎಲ್.ಸ್ವಾಮಿ ಅವರ ಪಾರ್ಥೀವ ಶರೀರಕ್ಕೆ ಶ್ರೀನಾಥ್ ನಮನ ಸಲ್ಲಿಸಿ ಕಂಬನಿ ಮಿಡಿದಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.