Breaking News
recent

ಜ್ಞಾನಕ್ಕೆ ಗಡಿಯಿಲ್ಲ ಆದರೆ ಗಡಿಯ ಶಾಲೆಗೆ ಉಳಿಗಾಲವಿಲ್ಲ !

ನಮ್ಮ ನಡುವೆ ಮಾದರಿಯಾಗಿ ನಿಂತಿರುವ ಬಹುತೇಕ ಸಾಧಕರು, ಯಾವುದೇ ಸೌಲಭ್ಯಗಳಿಲ್ಲದ ಸರ್ಕಾರಿ ಶಾಲೆಗಳಲ್ಲಿ ಜ್ಞಾನ ಮಾರ್ಗ ಕಂಡುಕೊಂಡು ಸಾಧನೆ ಮಾಡಿರುವುದನ್ನು ಮರೆಯುವಂತಿಲ್ಲ.
ಜ್ಞಾನಕ್ಕೆ ಗಡಿಯಿಲ್ಲ ಆದರೆ ಗಡಿಯ ಶಾಲೆಗೆ ಉಳಿಗಾಲವಿಲ್ಲ !

ಇಂಥ ಸರ್ಕಾರಿ ಶಾಲೆಗಳಲ್ಲಿ ಅಂದಿಗೂ, ಇಂದಿಗೂ ಯಾವುದೇ ದೊಡ್ಡ ಮಟ್ಟದ ವ್ಯತ್ಯಾಸ ಕಂಡುಬಂದಿಲ್ಲವೆಂಬುದು ನಾವು ಒಪ್ಪಲೇಬೇಕಾದ ಕಹಿಸತ್ಯ ಮತ್ತು ದುರಂತ.

ಈಗಿನ ಸರ್ಕಾರಿ ಶಾಲೆಗಳ ಮತ್ತು ಅಲ್ಲಿನ ವಿದ್ಯಾರ್ಥಿಗಳ ಸ್ಥಿತಿಗತಿಗಳ ಒಂದು ಕಿರು ಚಿತ್ರಣ ನಿಮ್ಮ ಮುಂದೆ ಪ್ರಸ್ತುತ ಪಡಿಸುವ ಪ್ರಯತ್ನ "ಆಕರ್ಷ" ಮತ್ತು ಅವರ ತಂಡ ಈ "ಪ್ರೆಸೆಂಟ್ ಸರ್" ಮೂಲಕ ಮಾಡಿದ್ದಾರೆ.

ಇಂದಿನ ದಿನಮಾನದಲ್ಲಿ ಧನಲಕ್ಷ್ಮಿ ಕೃಪೆ ಜೊತೆಗೆ ಸರ್ಕಾರದ ನೆರವು ಪಡೆಯುತ್ತಿರುವ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಮತ್ತು ಕನ್ನಡ ಭಾಷೆಯ ಮೇಲೆ ತಮ್ಮದೇ ರೀತಿಯಲ್ಲಿ ಸವಾರಿ ಮಾಡುತ್ತಿದ್ದಾರೆ ಅಲ್ಲದೆ ವಿದ್ಯೆಯನ್ನು ವ್ಯಾಪಾರವಾಗಿ ಮಾರ್ಪಡಿಸಿದ್ದಾರೆ.

ಕಥೆ ಏನು?: ಕಥನ ಅರ್ಪಿಸುವ 'ಪ್ರೆಸೆಂಟ್ ಸರ್' ಚಿತ್ರ ಫ್ರೆಂಚ್ ನ ಲೇಖಕ ಆಲ್ಫೋನ್ಸ್ ದೋದೆ ಹೆಣೆದಿರುವ ಸಣ್ಣ ಕಥೆಯನ್ನು ಆಧರಿಸಿದ್ದು ಇದನ್ನು ಕೇಶವ ಮಳಗಿಯವರು ಕೊನೆಯ ಪಾಠ ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಬೊಂಬೆಗಳ ಮೇಲೆ ಅತೀವ ಪ್ರೀತಿ ಹೊಂದಿರುವ ಸಣ್ಣ ಹುಡುಗನ ಸುತ್ತ ಈ ಕಥೆ ಸಾಗುತ್ತದೆ.


ವಿಶೇಷವೆಂದರೆ ನಮಗೆ ಮೊದಲ ಪಾಠದ ಪರಿಚಯವಾಗುವುದು ಅಂತ್ಯದಲ್ಲೇ ಅದು ಹೇಗೆ ಎಂಬ ಕುತೂಹಲಕ್ಕೆ ಉತ್ತರವನ್ನು ಚಿತ್ರ ನೋಡಿದಮೇಲಷ್ಟೇ ನೀವು ಕಂಡುಕೊಳ್ಳಬಹುದು .

ಆಕರ್ಷ ಮತ್ತು ಅವರ ತಂಡ ತಮ್ಮ ಮೊದಲ ಪ್ರಯತ್ನದಲ್ಲೇ ಚರ್ಚೆಗೊಳಪಡುವ ವಿಷಯಾಧಾರಿತ ಕಿರು ಚಿತ್ರವನ್ನು ಹೊರತರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಚಿತ್ರವೂ ಗಡಿನಾಡಿನ ಶಾಲೆಗಳ ಸ್ಥಿತಿಗತಿಗಳ ಪ್ರತಿಬಿಂಬಿಸುವ ಕನ್ನಡಿಯಾಗುವುದಲ್ಲದೆ ಇದರ ಕುರಿತು ಪ್ರತಿಯೊಬ್ಬರ ಅವಲೋಕನಕ್ಕೆ ದಾರಿ ಮಾಡಿಕೊಡುತ್ತದೆ.

ಕನ್ನಡ ಭಾಷೆಯ ಬೆಳವಣಿಗೆ ಸಂದೇಶ: ಪ್ರತಿಯೊಂದು ಗ್ರಾಮದಲ್ಲೂ ಒಂದೊಂದು ಶಾಲೆಯಿದ್ದರು ಅಲ್ಲಿ ಇರುವುದು ಮಾತ್ರ ಬೆರಳೆಣಿಕೆಯಷ್ಟು ಮಕ್ಕಳು. ಆ ಬೆರಳೆಣಿಕೆಯಷ್ಟು ಮಕ್ಕಳಲ್ಲೂ ಕಂಡು ಬರುವ ಹಾಜರಾತಿ ಕೊರತೆಯಿಂದಾಗಿ ಅದೆಷ್ಟೋ ಶಾಲೆಗಳಿಗೆ ಉಳಿಗಾಲವಿಲ್ಲದಂತಾಗಿದೆ ಮತ್ತು ವಿದ್ಯಾರ್ಥಿಗಳ ಗೈರು ಹಾಜರಿ ಮತ್ತು ಓದಿನ ಬಗೆಗಿನ ನಿರ್ಲಕ್ಷ್ಯ ಭಾಷೆಯ ಮೇಲೆ ಬೀರುತ್ತಿರುವ ಕೆಟ್ಟ ಪರಿಣಾಮವನ್ನು ಬಹಳ ಅಚ್ಚುಕಟ್ಟಾಗಿ ಚಿತ್ರಿಸಿ ಗಡಿ ಭಾಗಗಳಲ್ಲಿ ಅಕ್ಷರ ಕಲಿತರಷ್ಟೇ ಕನ್ನಡ ಭಾಷೆಯ ಬೆಳವಣಿಗೆ ಎಂಬ ಸ್ಪಷ್ಟ ಸಂದೇಶವನ್ನು ಈ ಮೂಲಕ ಸಮಾಜಕ್ಕೆ ರವಾನಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ವಟದ ಹೊಸಹಳ್ಳಿ ಎಂಬ ಗ್ರಾಮದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವೂ ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ನವೆಂಬರ್ ಅಂದರೆ ಕನ್ನಡದ ಮಾಸದಲ್ಲಿ ಆನ್ಲೈನ್ ಮುಖೇನ ಲೋಕಾದ್ಯಂತ ಇರುವ ಪ್ರತಿಯೊಬ್ಬ ಕನ್ನಡಿಗರ ಮುಂದೆ ಪ್ರೆಸೆಂಟ್ ಸರ್ ಎನ್ನಲು ಅಣಿಯಾಗಿದ್ದಾರೆ.

ಈ ಚಿತ್ರಕ್ಕೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜನೆಯಿದ್ದು, ಎಂ,ಅರ್ ಕಮಲಾ ರವರ ಒಂದು ಸಾಹಿತ್ಯ ಮತ್ತು ಗೋಪಾಲಕೃಷ್ಣ ಅಡಿಗರ ಕೆಲವು ಪದ್ಯಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಪತ್ರಕರ್ತ ನವೀನ್ ಸಾಗರ್ ರವರು ಒದಗಿಸಿದ್ದಾರೆ ಮತ್ತು ಸ್ಪರ್ಶ ರವರು ಸಹ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿದ್ದಾರೆ.

ಪಾತ್ರವರ್ಗ: ಗೋಪಾಲಕೃಷ್ಣ ದೇಶ ಪಾಂಡೆ, ಭಾವೇಶ್ ಅನಿಲ್ ಕುಮಾರ್, ನವೀನ ಸಾಗರ್, ಮಧುರ ರಾಮನ್ ಮತ್ತು ರಾಘವ್ ರಘು ಸಣ್ಣ ಪಾತ್ರದಲ್ಲಿ ಅಭಿನಯಿಸಿರುತ್ತಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.