Breaking News
recent

ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?

ಕಳಸಾ-ಬಂಡಾರಿ ನಾಲಾ ಯೋಜನೆಗೆ ಒತ್ತಾಯಿಸಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಹೋರಾಟ 60ನೇ ದಿನಕ್ಕೆ ಕಾಲಿಟ್ಟಿದೆ. ಕುಡಿಯುವ ನೀರಿಗಾಗಿ ರೈತರು ಮಾಡುತ್ತಿರುವ ಹೋರಾಟಕ್ಕೆ ಇಡೀ ಕನ್ನಡ ಚಿತ್ರರಂಗ ಇಂದು ಸಾಥ್ ನೀಡಿದೆ.
ಕಾವೇರಿ ನೀರು ಹೋರಾಟ ಮತ್ತು ಗೋಕಾಕ್ ಚಳುವಳಿಯಲ್ಲಿ ಒಂದಾಗಿದ್ದ ಚಿತ್ರರಂಗ, ಇದೀಗ ಕಳಸಾ-ಬಂಡೂರಿ ನಾಲಾ ಯೋಜನೆಗೆ ಚಾಲನೆ ಸಿಗಬೇಕು ಅನ್ನುವ ಕಾರಣಕ್ಕೆ ಇಡೀ ಸ್ಯಾಂಡಲ್ ವುಡ್ ಇಂದು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಕೈಗೊಂಡಿದೆ. [ನರೇಂದ್ರ ಮೋದಿಗೆ ನಮ್ಮ ಕೂಗು ಕೇಳಿಸಲಿ: ಶ್ರೀಮುರಳಿ]
ನಿನ್ನೆಯೇ ಹುಬ್ಬಳ್ಳಿಗೆ ಆಗಮಿಸಿದ ಸ್ಯಾಂಡಲ್ ವುಡ್ ತಾರೆಯರು ಇಂದು ಬೆಳಗ್ಗೆ ಮೂರು ಸಾವಿರ ಮಠದ ನಿರಂಜನ ಗುರುಸಿದ್ದ ಯೋಗರಾಜೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದು ಮೆರವಣಿಗೆ ಆರಂಭಿಸಿದರು. [ನೀರು ಹಂಚಿಕೆ ವಿವಾದಕ್ಕೆ ರಿಯಲ್ ಸ್ಟಾರ್ ರಿಂದ ಪರಿಹಾರ]
ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ದರ್ಶನ್, ಯಶ್, ರವಿಚಂದ್ರನ್, ಉಪೇಂದ್ರ, ಗಣೇಶ್, ದುನಿಯಾ ವಿಜಿ, ಶೃತಿ ಸೇರಿದಂತೆ ಎಲ್ಲಾ ತಾರೆಯರು ಮೆರವಣಿಗೆ ಮೂಲಕ ಸಂಗೊಳ್ಳಿ ರಾಯಣ್ಣ ವೇದಿಕೆಗೆ ಆಗಮಿಸಿ, ಬೃಹತ್ ಸಮಾವೇಶದಲ್ಲಿ ಭಾಷಣ ಮಾಡಿದರು. ಯಾರ್ಯಾರು ಏನು ಹೇಳಿದರು ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಶಿವರಾಜ್ ಕುಮಾರ್ 
ನಿಮ್ಮ ಕೂಗು ದೆಹಲಿವರೆಗೂ ಕೇಳಬೇಕು, ಇಡೀ ಪ್ರಪಂಚಕ್ಕೆ ಕೇಳಬೇಕು. ನಿಮ್ಮಲ್ಲರ ಜೊತೆ ನಾವಿದ್ದೀವಿ. ಕಲಾವಿದರು ನಿಮ್ಮ ಜೊತೆ ಇದ್ದಾರೆ. ನಾನು ಇವತ್ತು ಹೆಸರು ತೆಗೆದುಕೊಂಡಿದ್ದೀನಿ ಅಂದ್ರೆ ಅದು ನಿಮ್ಮಿಂದ. ನಿಮ್ಮ ಕಷ್ಟಕ್ಕೆ ನಾನು ಬಂದೇ ಬರುತ್ತೇನೆ. ನಾವು ತಮಿಳುನಾಡಿಗೆ ನೀರು ಕೊಡ್ತಿದ್ದೇವೆ. ನಾವು ಎಲ್ಲರಿಗೂ ಕೊಡ್ತೀವಿ. ನಮಗೆ ಮಾತ್ರ ಯಾರು ಕೊಡಲ್ಲ. ನಾವು ಪಾಕಿಸ್ತಾನದಿಂದ ನೀರು ಕೇಳ್ತಿದ್ದೀವಾ. ನಮ್ಮ ದೇಶದ ನೀರು ತಾನೆ ನಾವು ಕೇಳುತ್ತಿರುವುದು. ರೈತರಿಗೆ ನಿಜವಾಗೂ ಸಮಸ್ಯೆ ಆಗುತ್ತಿದೆ. ಸಾವು ಪರಿಹಾರ ಅಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳಲ್ಲ ಅಂತ ನಂಗೆ ಭಾಷೆ ಕೊಡಿ. ರೈತರ ಸಾಲ ಮನ್ನ ಮಾಡಿ ಅಂತ ಸರ್ಕಾರಕ್ಕೆ ನಾನು ಕೇಳಿಕೊಳ್ಳುತ್ತೇನೆ. ನಮ್ಮ ಹೋರಾಟಕ್ಕೆ ಇದು ನಾಂದಿ. ಇವತ್ತಿಂದ ನೀವು ಹೇಳಿದ ಹಾಗೆ ಎಲ್ಲಿಗೆ ಬೇಕಾದ್ರೂ ಬರ್ತೀವಿ.
ದರ್ಶನ್ 
ಉತ್ತರ ಕರ್ನಾಟಕದ ಕಡೆ ಪ್ರೀತಿಯಿಂದ ರೊಟ್ಟಿ ಮಾಡ್ತಾರೆ. ಪ್ರೀತಿಯಿಂದ ನೀರು ಕೊಟ್ರೆ, ಮೆದು ರೊಟ್ಟಿ ಕೊಡೋಣ. ಇಲ್ಲಾಂದ್ರೆ ಖಡಕ್ ರೊಟ್ಟಿ ಕೊಡೋಣ. ನೀರು ಕೊಟ್ಟರೆ ಸರಿ, ಇಲ್ಲಾಂದ್ರೆ ಉಗ್ರ ಹೋರಾಟ ಮಾಡೇಬಿಡೋಣ.

ಪುನೀತ್ ರಾಜ್ ಕುಮಾರ್ 
ನಾವೆಲ್ಲರೂ ಭಾರತೀಯರು. ಸಮಸ್ಯೆ ಬಂದಾಗ ಎಲ್ಲರ ಜೊತೆ ಎಲ್ಲರೂ ಇರುತ್ತೀವಿ. ಕೇಂದ್ರ ಸರ್ಕಾರ ಇದಕ್ಕೊಂದು ಪರಿಹಾರ ಕೊಡಲಿ ಅಂತ ನಾನು ಕೇಳಿಕೊಳ್ಳುತ್ತೇನೆ.

ಉಪೇಂದ್ರ 
ನಮ್ಮ ಭಾರತ ಹೆಂಗಿತ್ತು.? ಬ್ರಿಟಿಷರು, ಡಚ್, ಫ್ರೆಂಚ್ ಎಲ್ಲರೂ ಬಂದು ದೋಚಿಕೊಂಡು ಹೋದರು. ಭಾರತ ಶ್ರೀಮಂತ ರಾಷ್ಟ್ರ. ಇಡೀ ಪ್ರಪಂಚಕ್ಕೆ ಕೊಡೋ ಕೈ ಭಾರತ. ಕೊಡುವುದಕ್ಕೆ ಕಲೀಬೇಕು ನಾವು. ರೈತರು ಕಷ್ಟದಲ್ಲಿದ್ದಾರೆ. ನೀರು ಕೊಡಿ. ಕೊಟ್ಟು ನೋಡಿ. ನಮ್ಮ ನಾಯಕರು ಇದನ್ನ ಪರಿಹರಿಸಬೇಕು.

ಯಶ್ 
ಹೋರಾಟಕ್ಕೆ ನಾವೆಲ್ಲರೂ ಒಂದಾಗಿದ್ದೇವೆ. ಅದೇ ನಮ್ಮ ಮೊದಲ ಗೆಲುವು. ನಾವೆಲ್ಲರೂ ಒಂದಾಗಿದ್ದರೆ ಪ್ರಾಬ್ಲಂ ಸಾಲ್ವ್ ಆಗುತ್ತೆ. ನಾಯಕರು ಇದಕ್ಕೆ ಮುಂದಾಗಬೇಕು. ಪ್ರಧಾನಿ ಇದಕ್ಕೆ ಸ್ಪಂದಿಸಬೇಕು. ನಮಗೆಲ್ಲರಿಗೂ ಖಂಡಿತ ನೋವಾಗಿದೆ. ನಿಮ್ಮ ಜೊತೆ ನಾವಿದ್ದೇವೆ.
ರವಿಚಂದ್ರನ್ 
ನಮ್ಮಲ್ಲಿರುವ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳುವುದಕ್ಕೆ ನಾವು ಜೊತೆ ಸೇರಿರ್ಲಿಲ್ಲ. ಆದ್ರೆ, ನಿಮ್ಮ ಪ್ರೀತಿ-ಅಭಿಮಾನಕ್ಕಾಗಿ ನಾವೆಲ್ಲಾ ಒಗ್ಗಟ್ಟಾಗಿ ಬಂದಿದ್ದೇವೆ. ರಾಜಕಾರಣಿಗಳಿಗೆ ದುಡ್ಡಿನ ಮೇಲೆ ಮೋಹ ಹೋಗುವವರೆಗೆ, ನಮ್ಮ ನೀರಿನ ದಾಹ ಹೋಗುವುದಿಲ್ಲ. ಪ್ರತಿ ಬಾರಿ ನಿಮ್ಮ ನೋವಿನಲ್ಲಿ, ಸಂತೋಷದಲ್ಲಿ ನಾವು ಭಾಗಿಯಾಗುತ್ತೇವೆ. ಯಾವಾಗ ಕರೆದರೂ ನಾವು ಬರುತ್ತೇವೆ.
ಶೃತಿ 
ನಿಮ್ಮ ನೋವಿನ ಜೊತೆ ನಾವಿದ್ದೇವೆ. ಮಹಾದಾಯಿ ನದಿ ಈ ಭಾಗಕ್ಕೆ ಬರುವವರೆಗೂ ನಾವು ಹೋರಾಟ ಮಾಡುತ್ತೇವೆ. ಇದೇ ಜಾಗದಲ್ಲಿ ಡಾ.ರಾಜ್ ಕುಮಾರ್ ''ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು..'' ಅಂತ ಹಾಡು ಹಾಡಿದ್ದರು. ಆದ್ರೆ, ಇದೇ ಜಾಗದಲ್ಲಿ ರೈತರು ''ಯಾಕಾದರೂ ಹುಟ್ಟಿದೆವೋ'' ಅಂತ ಕೊರಗುವ ಪರಿಸ್ಥಿತಿ ಬಂದಿದೆ. ರೈತರ ಜೊತೆ ಇಡೀ ಚಿತ್ರರಂಗ ಇದೆ. ನಮ್ಮೆಲ್ಲರ ಬೆಂಬಿಲ ನಿಮ್ಮ ಜೊತೆ ಸದಾ ಇರುತ್ತೆ. ನಮ್ಮೆಲ್ಲರ ಹೋರಾಟ ಇವತ್ತಿಂದ ಶುರು.
ಭಾರತಿ ವಿಷ್ಣುವರ್ಧನ್ 
ನಿಮ್ಮ ಕಷ್ಟ ಬೇರೆ ಅಲ್ಲ, ನಮ್ಮ ಕಷ್ಟ ಬೇರೆ ಅಲ್ಲ. ಕಷ್ಟ ಎಲ್ಲರಿಗೂ ಒಂದೆ. ಇವತ್ತಿನ ಹೋರಾಟ ದೆಹಲಿವರೆಗೂ ತಲುಪಬೇಕು. ಈ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗ್ಬೇಕು. ನೀರಿಲ್ಲದೆ ಜೀವನಕ್ಕೆ ಮಾಡುವುದಕ್ಕೆ ಆಗಲ್ಲ. ನಮ್ಮ ಚಿತ್ರರಂಗ ನಿಮ್ಮ ಜೊತೆ ಸದಾ ಇರ್ತಿವಿ.
ಗಣೇಶ್ 
ಯಾವುದೇ ಸಿನಿಮಾ ಆಗಲಿ, ಹ್ಯಾಪಿ ಎಂಡಿಂಗ್ ಆದ್ರೆ ಹಿಟ್ ಆಗುತ್ತೆ. ನಿಮ್ಮ ಹೋರಾಟಕ್ಕೂ ಹ್ಯಾಪಿ ಎಂಡಿಂಗ್ ಸಿಗಲಿ ಅಂತ ನಾನು ಹಾರೈಸುತ್ತೇನೆ.
ಜಯಮಾಲ 
ನೀವೆಲ್ಲರೂ ಇಷ್ಟು ಗಟ್ಟಿಯಾಗಿ ನಿಂತರೆ, ಖಂಡಿತ ಎಲ್ಲರಿಗೂ ನೀರು ಸಿಕ್ಕೇಸಿಗುತ್ತೆ. ಇವತ್ತು ಇಡೀ ಚಿತ್ರರಂಗ ನಿಮ್ಮ ಜೊತೆ ಇದೆ. ಇಚ್ಛಾಶಕ್ತಿ ಇದ್ರೆ ಈ ಸಮಸ್ಯೆ ಖಂಡಿತ ಬಗೆಹರಿಸಬಹುದು. ಮೋದಿ ಮನಸ್ಸು ಮಾಡಿದ್ರೆ ಖಂಡಿತ ಆಗುತ್ತೆ. ನರೇಂದ್ರ ಮೋದಿ ಮಧ್ಯಸ್ತಿಕೆ ವಹಿಸ್ಬೇಕು. ಇದು ಬರೀ ರೈತರ ಹೋರಾಟ ಅಲ್ಲ. ನಮ್ಮೆಲ್ಲರ ಹೋರಾಟ.
ದುನಿಯಾ ವಿಜಯ್ 
ನಿಮ್ಮೆಲ್ಲರ ಹೋರಾಟ ನಮ್ಮದು ಅಂದುಕೊಂಡು ನಾವು ಬಂದಿದ್ದೇವೆ. ನಿಮ್ಮ ಜೊತೆ ನಾವು ಇದ್ದೇ ಇರುತ್ತೇವೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.