Breaking News
recent

ಸಿನಿಮಾ ಬೆಳಕಿನೆಡೆಗೆ...

ಸಿನಿಮಾ ಬೆಳಕಿನೆಡೆಗೆ...
ಸಿನಿಮಾ ಬೆಳಕಿನೆಡೆಗೆ...

ಅರಗಿಣಿ ಧಾರಾವಾಹಿಯಲ್ಲಿ ಖುಷಿಯ ಅಕ್ಕನ ಪಾತ್ರ ಮಾಡಿದ್ದ ನಟಿ ರಶ್ಮಿ ಎಂ. ರಾವ್ ಅವರಿಗೆ ಮೂರು ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶಗಳ ಬಾಗಿಲು ತೆರೆದಿದೆ. ಆ ಸಿನಿಮಾಗಳ ಹೆಸರುಗಳನ್ನು ಮಾತ್ರ ಕೇಳಬೇಡಿ ಎನ್ನುವ ರಶ್ಮಿ ಅವರು ತಮ್ಮ ದೇಹ ಸೌಂದರ್ಯ ಕಾಪಾಡಲು ದಿನಕ್ಕೆ ಒಂದೂವರೆಯಿಂದ ಎರಡು ಗಂಟೆ ಜಿಮ್‌ನಲ್ಲಿ ಬೆವರಿಳಿಸುತ್ತಾರೆ. ಜೊತೆಗೆ ಕಟ್ಟುನಿಟ್ಟಾಗಿ ಡಯಟ್‌ ಅನ್ನೂ ಪಾಲಿಸುತ್ತಿದ್ದಾರೆ.
ಮಂಗಳೂರು ಸಮೀಪದ ಕದ್ರಿಯಲ್ಲಿ ಹುಟ್ಟಿದ ರಶ್ಮಿ ಎಂ.ರಾವ್‌ ಓದಿದ್ದು ಬೆಂಗಳೂರಿನಲ್ಲಿ. ಎಂ.ಇ.ಎಸ್‌. ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ ಇವರು ಅನೇಕ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸಿದರು. ನಂತರ ಮಂಗಳೂರಿನ ಸ್ಥಳೀಯ ವಾಹಿನಿಯೊಂದರಲ್ಲಿ ಅಡುಗೆ ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡಿದರು. ಟೀವಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ‘ಕುಲಗೌರವ’ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಒದಗಿಬಂದಿತು. ಇಲ್ಲಿಯೂ ಮುಖ್ಯಪಾತ್ರ ನಿರ್ವಹಿಸಿದ ರಶ್ಮಿ ಅವರಿಗೆ ನಟನೆಯನ್ನು ಕರಗತ ಮಾಡಿಕೊಳ್ಳಲು ಇದರಿಂದ ಅನುಕೂಲವಾಯಿತು. ನಂತರ ‘ಅರಗಿಣಿ’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿ ಮೆಚ್ಚುಗೆ ಗಳಿಸಿದರು.
‘ರವಿ ಗರಣಿ ಅವರ ಅರಗಿಣಿ ಧಾರಾವಾಹಿಯಲ್ಲಿ ನಟಿಸಿದ್ದರಿಂದ  ನಟನೆ ಬಗ್ಗೆ ಹೆಚ್ಚು ಹೆಚ್ಚು ಕಲಿಯಲು ಸಹಕಾರಿಯಾಯಿತು. ಇದೊಂದು ಹಿಂದಿ ಧಾರಾವಾಹಿಯ ರಿಮೇಕ್‌. ನಾನು ಬಡ ಕುಟುಂಬದ ಹಿನ್ನೆಲೆಯ ಹೆಣ್ಣಿನ ಪಾತ್ರವನ್ನು ನಿಭಾಯಿಸಿದೆ. ಒಳ್ಳೆಯ ಪಾತ್ರವಾಗಿತ್ತು. ನಟನೆಗಾಗಿ ಯಾವುದೇ ಶಾಲೆ ಮೆಟ್ಟಿಲು ಹತ್ತಿದವಳಲ್ಲ. ಧಾರಾವಾಹಿಗಳಲ್ಲಿ ನಟಿಸಿಯೇ ಕಲಿತದ್ದು, ನನಗೆ ನಟನೆ ಮೇಲೆ ಪ್ರೀತಿ ಮೂಡಲು ಅತ್ತೆ ಮಗಳು ನಾಗಶ್ರೀ ಕಾರಣ. ಆಕೆಯೂ ಕಿರುತೆರೆ ನಟಿಯಾಗಿದ್ದರು. ಅಲ್ಲದೇ ಮನೆಯವರ ಪ್ರೋತ್ಸಾಹವೂ ಇದೆ’ ಎನ್ನುತ್ತಾರೆ ರಶ್ಮಿ ಎಂ. ರಾವ್‌.
ಕಟ್ಟುನಿಟ್ಟಿನ ಡಯಟ್‌
ರಶ್ಮಿ ಬೆಳಿಗ್ಗೆ ಎಲೆಕೋಸಿನ ಸೂಪ್‌ ಕುಡಿಯುತ್ತಾರೆ. ಹಸಿವಾದಾಗ ಮೂಸಂಬಿ, ಕಿತ್ತಳೆ ಹಣ್ಣಿನ ಜ್ಯೂಸ್‌ ಇರಬೇಕಂತೆ. ಮಧ್ಯಾಹ್ನ ಹಣ್ಣುಗಳನ್ನು ತಿನ್ನುವ ಇವರು ರಾತ್ರಿ 8ರ ಒಳಗೆ ಎರಡು ಚಪಾತಿ ಇದ್ದರೆ ಸಾಕೆನ್ನುತ್ತಾರೆ. ಅನ್ನ, ತುಪ್ಪ ಇಷ್ಟವಾದರೂ ಡಯಟ್‌ ಮಾಡುತ್ತಿರುವುದರಿಂದ ಇವೆರಡನ್ನೂ ದೂರ ಮಾಡಿದ್ದಾರಂತೆ.
‘‘ವಿಟಮಿನ್ ‘ಸಿ’ ಮತ್ತು ‘ಇ’ ಇರುವ ಆಹಾರ ತಿಂದರೆ ಚರ್ಮದ ಸೌಂದರ್ಯ ಚೆನ್ನಾಗಿ ಕಾಪಾಡಿಕೊಳ್ಳಬಹುದು. ಮನೆಯಿಂದ ಹೊರ ಹೋಗುವಾಗ ಹೆಚ್ಚು ಮೇಕಪ್‌ ಮಾಡಿಕೊಳ್ಳುವ ಅಗತ್ಯ ಬರುವುದಿಲ್ಲ.  ಬಿಡುವಿನ ವೇಳೆಯಲ್ಲಿ ಕನ್ನಡದ ಕಾದಂಬರಿಗಳನ್ನು ಓದುತ್ತೇನೆ. ಅಗತ್ಯಕ್ಕೆ  ತಕ್ಕಂತೆ ಸಾಮಾಜಿಕ ಜಾಲತಾಣವನ್ನು ಉಪಯೋಗಿಸುತ್ತೇನೆ. ಆನ್‌ಲೈನ್‌ ಶಾಪಿಂಗ್‌ ಸಹ ಮಾಡುತ್ತೇನೆ. ಈಗಾಗಲೇ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು, ಸಿನಿಮಾಗಳಲ್ಲೂ ಹೆಚ್ಚಿನ ಶ್ರಮ ಹಾಕಿ ಅಭಿನಯಿಸುತ್ತೇನೆ. ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂಬ ಬಯಕೆಯಿದೆ’’ ಎನ್ನುತ್ತಾರೆ ರಶ್ಮಿ.
ತಂಗಿಯ ಬಳಿ ಸಮಕಾಲೀನ ನೃತ್ಯವನ್ನು ಕಲಿಯುತ್ತಿರುವ ರಶ್ಮಿ ಅವರು ಕನ್ನಡ ಸಿನಿಮಾಗಳಲ್ಲದೇ ಇತರೆ ಭಾಷೆಯ ಸಿನಿಮಾಗಳನ್ನು ನೋಡುವ ಮೂಲಕ ತಮ್ಮ ಅಭಿನಯದಲ್ಲಿ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾರೆ.  ರಶ್ಮಿ ಅವರಿಗೆ ಕನ್ನಡದ ನಟರಲ್ಲಿ ಪುನೀತ್‌ ರಾಜ್‌ಕುಮಾರ್‌ ಇಷ್ಟ.
Fresh Kannada

Fresh Kannada

No comments:

Post a Comment

Google+ Followers

Powered by Blogger.