Breaking News
recent

ಕಲರ್‌ನಲ್ಲಿ ರಾಜ್‌ ಕಸ್ತೂರಿ ನಿವಾಸ

ಕಲರ್‌ನಲ್ಲಿ ರಾಜ್‌ ಕಸ್ತೂರಿ ನಿವಾಸ
ಕಲರ್‌ನಲ್ಲಿ ರಾಜ್‌ ಕಸ್ತೂರಿ ನಿವಾಸ

ಡಾ.ರಾಜ್‌ಕುಮಾರ್‌ ಅಭಿಮಾನಿಗಳಿಗೆ ಇಲ್ಲೊಂದು ಸಂತಸದ ಸುದ್ದಿ! ವಿಷಯ ಏನಪ್ಪಾ ಅಂದರೆ, ನಾಲ್ಕು ದಶಕಗಳ ಹಿಂದಿನ ಸೂಪರ್‌ ಹಿಟ್‌ ಸಿನಿಮಾ "ಕಸ್ತೂರಿ ನಿವಾಸ' ಮತ್ತೆ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಕಪ್ಪು ಬಿಳುಪು ಚಿತ್ರವೀಗ ಬಣ್ಣದ ರೂಪ ಪಡೆದು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. 


ಅಂದಹಾಗೆ, ನವೆಂಬರ್‌ 7 ರಂದು ರಾಜ್ಯಾದ್ಯಂತ "ಕಸ್ತೂರಿ ನಿವಾಸ' ತೆರೆಕಾಣುತ್ತಿದೆ.43 ವರ್ಷಗಳ ಹಿಂದೆ ತೆರೆಕಂಡು ಕನ್ನಡಿಗರ ಮನಗೆದ್ದಿದ್ದ ಕಪ್ಪು ಬಿಳುಪು "ಕಸ್ತೂರಿ ನಿವಾಸ' ಚಿತ್ರವನ್ನು ಕಲರ್‌ ಚಿತ್ರವನ್ನಾಗಿ ಮಾರ್ಪಡಿಸಿ ತೆರೆಕಾಣಿಸಲು ಸಜ್ಜಾಗಿರೋದು ಹಿರಿಯ ನಿರ್ಮಾಪಕ ಕೆಸಿಎನ್‌ ಗೌಡರ ಪುತ್ರ ಕೆ.ಸಿ.ಮೋಹನ್‌. ಈಗ ಡಿಐ ಮತ್ತು ಡಿಟಿಎಸ್‌ನೊಂದಿಗೆ ಹೊಸ ರೂಪ ಪಡೆದಿರುವ ಚಿತ್ರವನ್ನು ಭೂಮಿಕಾ ಚಿತ್ರಮಂದಿರದಲ್ಲಿ ರಿಲೀಸ್‌ ಮಾಡಲು ನಿರ್ಮಾಪಕರು ಯೋಚಿಸಿದ್ದಾರೆ.

ನಿರ್ದೇಶಕ ಭಗವಾನ್‌ಗೆ "ಕಸ್ತೂರಿ ನಿವಾಸ' ವರ್ಣಮಯವಾಗಿ ರೂಪಗೊಂಡು ತೆರೆಕಾಣುತ್ತಿರುವುದು ಖುಷಿ ಕೊಟ್ಟಿದೆಯಂತೆ. "ಹೊಸ ತಂತ್ರಜ್ಞಾನ ಹೊತ್ತು ಬಂದಿರುವ ಚಿತ್ರವನ್ನು ಈಗಿನ ಜನರೇಷನ್‌ಗೂ ತಲುಪಿಸಬೇಕೆಂಬ ಉದ್ದೇಶ ನಿರ್ಮಾಪಕರದ್ದು. ಕೆಸಿಎನ್‌ ಗೌಡರಿಗೆ ಈ ಚಿತ್ರವನ್ನು ಕಲರ್‌ನಲ್ಲಿ ನಿರ್ಮಿಸಬೇಕೆಂಬ ಆಸೆ ಕಳೆದ 35 ವರ್ಷಗಳಿಂದಲೂ ಇತ್ತು. ಆದರೆ, ಅದು ಈಡೇರಿರಲಿಲ್ಲ. ಅವರ ಆಸೆ ಈಗ ಈಡೇರಿದೆ. ಕಪ್ಪು ಬಿಳುಪು ಚಿತ್ರವಾಗಿದ್ದಾಗ ಬೀರಿದ್ದ ಪರಿಣಾಮಕ್ಕಿಂತಲೂ ಈಗ ಕಲರ್‌ನಲ್ಲಿ ಹೆಚ್ಚು ಪ್ರಭಾವ ಬೀರಲಿದೆ ಎಂಬ ವಿಶ್ವಾಸವಿದೆ.

ನಾಲ್ಕು ದಶಕಗಳಲ್ಲಿ "ಕಸ್ತೂರಿ ನಿವಾಸ' ಎರಡು ಸಲ ಮಾತ್ರ ರೀ ರಿಲೀಸ್‌ ಆಗಿತ್ತು. ಈಗ ಕಲರ್‌ನಲ್ಲಿ ತೆರೆಕಾಣುತ್ತಿದೆ. ಇದಕ್ಕಿಂತ ಸಂತಸ ಬೇರೊಂದಿಲ್ಲ' ಎಂದು ಖುಷಿ ಹೊರಹಾಕುತ್ತಾರೆ ನಿರ್ದೇಶಕ ಭಗವಾನ್‌.

"ಕಸ್ತೂರಿ ನಿವಾಸ'ವನ್ನು ಕಲರ್‌ನಲ್ಲಿ ತೋರಿಸಲು ನಿರ್ಮಾಪಕರು ಸಾಕಷ್ಟು ಶ್ರಮಿಸಿದ್ದಾರೆ. ಅವರಿಗೆ ಹಣಕ್ಕಿಂತ ಅವರ ತಂದೆಯ ಆಸೆ ಮುಖ್ಯವಾಗಿತ್ತು. ಅದೇ ಕಾರಣಕ್ಕೆ, ನಿಧಾನವಾಗಿಯಾದರೂ ಚಿತ್ರವನ್ನು ವರ್ಣಮಯಗೊಳಿಸಿ ಬಿಡುಗಡೆ ಮಾಡುತ್ತಿದ್ದಾರೆ.

ಕಲರ್‌ ರೂಪ ಪಡೆದ ಚಿತ್ರಕ್ಕೆ ಸುಮಾರು 60 ಜನರ ತಂಡ ಕೆಲಸ ಮಾಡಿದೆ. ನಾಲ್ಕುವರ್ಷಗಳ ಹಿಂದೆಯೇ ಚಿತ್ರಕ್ಕೆ ಕೆಲಸ ಶುರುವಾಗಿತ್ತು. ಆದರೆ, ಕೆಲ ಕಾರಣಾಂತರಗಳಿಂದ ಕೆಲಸ ತಡವಾಗಿದೆ. ಒಂದು ವರ್ಷದಲ್ಲಿ "ಕಸ್ತೂರಿ ನಿವಾಸ' ಚಿತ್ರವನ್ನು ಬಣ್ಣದ ರೂಪದಲ್ಲಿ ಅಂದಗೊಳಿಸಲಾಗಿದೆ. ಇದಕ್ಕೆ ಸುಮಾರು 2 ಕೋಟಿ ರೂ. ವೆಚ್ಚ ತಗುಲಿದ್ದು, ರಿಲೀಸ್‌ ಹೊತ್ತಿಗೆ ಇನ್ನೊಂದಿಷ್ಟು ವೆಚ್ಚವಾಗುವ ಸಾಧ್ಯತೆ ಇದೆ.

ಇನ್ನು, ಕರ್ನಾಟಕವಷ್ಟೇ ಅಲ್ಲ, ವಿದೇಶದಲ್ಲೂ ಈ ಚಿತ್ರವನ್ನು ರಿಲೀಸ್‌ ಮಾಡುವ ಉದ್ದೇಶ ನಿರ್ಮಾಪಕರಿಗಿದೆ. ಈಗಾಗಲೇ ರಘು ಎನ್ನುವವರು, ಅಮೇರಿಕಾ, ದುಬೈ, ಸಿಂಗಾಪುರ್‌, ಜರ್ಮನಿಯಲ್ಲೂ ರಿಲೀಸ್‌ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರಂತೆ. ಅಭಿಮಾನಿಗಳು ಈಗಾಗಲೇ ಚಿತ್ರ ಬಿಡುಗಡೆ ದಿನ ಒಂದಷ್ಟು ಮಂದಿಗೆ ಬಾಳೆ ಎಲೆ ಊಟ ಹಾಕಿಸುವ ಯೋಜನೆ ಇಟ್ಟುಕೊಂಡಿದ್ದಾರೆ. "ಕಸ್ತೂರಿ ನಿವಾಸ'ಕ್ಕೆ ಕಲರ್‌ ಮಾಡಿದ ಕೀರ್ತಿ ಸುಂದರ್‌,ಷಣ್ಮುಗಂ ಮತ್ತು ತಂಡಕ್ಕೆ ಸೇರುತ್ತದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.