Breaking News
recent

‘ವೀರ ಪುಲಿಕೇಶಿ’ಗೆ ವೀರಪ್ಪನ್‌ ಸ್ಫೂರ್ತಿ

ದಂತಚೋರ ವೀರಪ್ಪನ್‌ನನ್ನು ಹಿಡಿಯಲು ಹೋದ 10 ಜನ ಪೊಲೀಸರ ತಂಡ ತಲೆ ಕಳೆದುಕೊಂಡ ದಾರುಣ ಘಟನೆ ನಿರ್ದೇಶಕ ಮಂಜುನಾಥ ಬಾಬು ಅವರನ್ನು ಕಾಡಿದೆ. ಆ ಘಟನೆ ಅವರಲ್ಲಿ ಸಿನಿಮಾದ ಎಳೆಯ ಹುಟ್ಟಿಗೂ ಸ್ಫೂರ್ತಿ ನೀಡಿದೆ. ಅದರ ಫಲವೇ ‘ವೀರ ಪುಲಿಕೇಶಿ’.
ತಮ್ಮ ಚಿತ್ರಕ್ಕೆ ಹೊಸಮುಖವೇ ಬೇಕು ಎಂಬ ಹುಡುಕಾಟದಲ್ಲಿದ್ದರು ಮಂಜುನಾಥ ಬಾಬು. ಈಗಾಗಲೇ ಜನಪ್ರಿಯವಾಗಿರುವ ಮುಖವನ್ನೇ ನಾಯಕನ ಪಾತ್ರಕ್ಕೆ ಆರಿಸೋಣ ಎಂಬ ಅಭಿಪ್ರಾಯ ನಿರ್ಮಾಪಕರಾದ ಗಿರೀಶ್‌ ಮತ್ತು ವೀರೇಶ್‌ ಅವರದ್ದು. ನಿರ್ದೇಶಕರ ಹಟವೇ ಗೆದ್ದಿತು. ಹೊಸಮುಖದ ಹುಡುಕಾಟದಲ್ಲಿದ್ದ ನಿರ್ದೇಶಕರಿಗೆ ಗರಡಿ ಮನೆಯಲ್ಲಿ ದೇಹವನ್ನು ಸಾಮು ಮಾಡಿದ್ದ ಭರತ್‌ ಕಣ್ಣಿಗೆ ಬಿದ್ದರು. ಅವರಿಗೇ ಪೊಲೀಸ್‌ ದಿರಿಸು ತೊಡಿಸುವುದೆಂದು ನಿರ್ಧರಿಸಿದ್ದರೂ ಅದಕ್ಕೆ ಅಂಕಿತ ಬೀಳಬೇಕಿದ್ದುದು ಭರತ್‌ರ ಮಾವ ಅರ್ಜುನ್‌ ಸರ್ಜಾ ಅವರಿಂದ. ಕಥೆ ಕೇಳಿ ಮೆಚ್ಚಿದ ಅರ್ಜುನ್‌ ಸರ್ಜಾ– ಮೊದಲ ಚಿತ್ರದಲ್ಲಿಯೇ ಪೊಲೀಸ್‌ ಪಾತ್ರ ಸಿಗುವುದು ಅಪರೂಪ. ಚೆನ್ನಾಗಿ ಮಾಡು ಎಂದು ಅಳಿಯನ ಬೆನ್ನುತಟ್ಟಿದರು.
ವೀರಪ್ಪನ್‌ನಿಂದ ಹತನಾದ ಅಧಿಕಾರಿಯ ಮಗನ ಪಾತ್ರದಲ್ಲಿ ಭರತ್‌ ಕಾಣಿಸಿಕೊಂಡಿದ್ದಾರೆ. ಈ ವಾರ ತೆರೆಕಾಣುತ್ತಿರುವ ತಮ್ಮ ಚೊಚ್ಚಿಲ ಚಿತ್ರದ ಬಗ್ಗೆ ಅವರಲ್ಲಿ ಭರವಸೆ ಇದೆ. ಹೊಡೆದಾಟ ಮತ್ತು ಸಂಭಾಷಣೆ ಈ ಚಿತ್ರದ ಮುಖ್ಯಾಂಶಗಳು ಎಂದರು ಭರತ್‌.
ಚಿತ್ರಕಥೆಯಲ್ಲಿ ಬೆಂಗಳೂರಿನಲ್ಲಿ ನಡೆದ ಭೂಗತ ಜಗತ್ತಿನ ಕೆಲವು ನೈಜ ಘಟನೆಗಳನ್ನೂ ಮಂಜುನಾಥ್‌ ಬಾಬು ಬಳಸಿಕೊಂಡಿದ್ದಾರಂತೆ. ನಟ ರವಿಶಂಕರ್‌ ಖಳನಾಯಕನ ಪೋಷಾಕು ಧರಿಸಿದ್ದಾರೆ. ಖಳನಾಯಕನಿಗಾಗಿಯೇ ಹಾಡೊಂದನ್ನು ಚಿತ್ರದಲ್ಲಿರಿಸಿದ್ದಾರೆ. ಅದಕ್ಕೆ ಸ್ವತಃ ರವಿಶಂಕರ್‌ ದನಿ ನೀಡಿರುವುದು ವಿಶೇಷ. ಭರತ್‌ರ ಸಹೋದರ ವಿಜೇತ್‌ ಮತ್ತು ಅವರ ಸ್ನೇಹಿತ ಚಂದನ್‌ ಜೊತೆಗೂಡಿ ನಾಲ್ಕು ಹಾಡುಗಳಿಗೆ ಮಟ್ಟು ಹಾಕಿದ್ದಾರೆ. ವಿಜೇತ್‌ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಬಳಿ ಕೆಲಸ ಮಾಡುತ್ತಿದ್ದರೆ, ಚಂದನ್‌ ಮೂಲತಃ ಗಾಯಕ.
ಚಿತ್ರಮಂದಿರಗಳನ್ನು ಪಡೆಯುವುದು ಸಿನಿಮಾ ಮಾಡುವುದಕ್ಕಿಂತಲೂ ಕಷ್ಟದ ಕೆಲಸ ಎನ್ನುವ ಅನುಭವ ನಿರ್ಮಾಪಕ ಗಿರೀಶ್‌ ಅವರಿಗೆ ಆಗಿದೆ. ದೊಡ್ಡ ಸಿನಿಮಾ ಯಾವುದೂ ಈ ವಾರ ತೆರೆಕಾಣದೆ ಇರುವುದರಿಂದ ತಮ್ಮ ಚಿತ್ರಕ್ಕೆ ಲಾಭವಾಗಲಿದೆ ಎನ್ನುವ ನಂಬಿಕೆ ಅವರದು.
Fresh Kannada

Fresh Kannada

No comments:

Post a Comment

Google+ Followers

Powered by Blogger.